Thursday, 27 July 2017

ಗೋಳಿ ಬಜೆ

ಬೇಕಾಗುವ ಸಾಮಾಗ್ರಿಗಳು: 

ಮೈದಾ ಹಿಟ್ಟು – 1/4 ಕಿಲೋ
ಹಸಿಮೆಣಸು – 2
ಶುಂಠಿ - ಸಣ್ಣ ತುಂಡು
ಕರಿಬೇವು ಸೊಪ್ಪು – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಹುಳಿ ಮಜ್ಜಿಗೆ – 2 ಲೋಟ
ಇಂಗು - ಹುಣಿಸೆಬೀಜ ಗಾತ್ರದಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ : -

ಹಸಿಮೆಣಸು, ಶುಂಠಿ, ಕರಿಬೇವು ಸೊಪ್ಪುಗಳನ್ನು ಸಣ್ಣಗೆ ಹಚ್ಚಿ ಮೈದಾ ಹಿಟ್ಟಿಗೆ ಹಾಕಿ. ಉಪ್ಪು ಮತ್ತು ಇಂಗು ನೀರನ್ನು ಬೆರೆಸಿ. ಹುಳಿಮಜ್ಜಿಗೆ ಹಾಕಿ ಚೆನ್ನಾಗಿ ಕಲಸಿ. ನೀರು ಬೆರೆಸಬಾರದು. ವಡೆಮಾಡುವ ಹಿಟ್ಟಿಗಿಂತ ಸ್ವಲ್ಪ ನೀರಾಗಿರಲಿ. ಬಾಣಲೆಯಲ್ಲಿ ಎಣ್ಣೆಹಾಕಿ ಕಾಯಲು ಬಿಡಿ. ಎಣ್ಣೆ ಕಾದನಂತರ ಹಿಟ್ಟನ್ನು ಗೋಲಿಯಾಕರದಲ್ಲಿ ಎಣ್ಣೆಗೆ ಬಿಡಿ. ಚೆನ್ನಾಗಿ ಕಾದ ನಂತರ ಬಿಸಿ ಬಿಸಿ ಇರುವಾಗಲೆ ಚಟ್ನಿಯೊಂದಿಗೆ ಸವಿಯಲು ಕೊಡಿ. 

ನೇಂದ್ರ ಬಾಳೆಹಣ್ಣಿನ ಪೋ ಡಿ

ಬೇಕಾಗುವ ಸಾಮಾಗ್ರಿಗಳು : -

ನೇಂದ್ರ ಬಾಳೆಹಣ್ಣು – 2
ಕಡ್ಲೆ ಹಿಟ್ಟು - ¼ ಕೆಜಿ
ಅಕ್ಕಿಹಿಟ್ಟು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಇಂಗು - ಹುಣಿಸೆ ಬೀಜ ಗಾತ್ರದಷ್ಟು
ಮೆಣಸಿನ ಹುಡಿ – 1 ಚಮಚ
ಕರಿಯಲು ಎಣ್ಣೆ – 1/2 ಲೀಟರ್

ಮಾಡುವ ವಿಧಾನ: - 
ಬಾಳೆಹಣ್ಣನ್ನು ಸುಲಿದು ಪೋಡಿ  ತಯಾರಿಸಲು ಬೇಕಾದ ಆಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಇಂಗು ನೀರು ಮತ್ತು ಮೆಣಸಿನ ಹುಡಿ ಇವೆಲ್ಲವನ್ನೂ ಸೇರಿಸಿ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾದ ನಂತರ ಕತ್ತರಿಸಿಟ್ಟ ಬಾಳೆಹಣ್ಣಿನ ಹೋಳುಗಳನ್ನು ಒಂದೊಂದಾಗಿ ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕಾಯಿಸಿ. ಎರಡು ಬದಿ ಕಾದ ನಂತರ ಬಾಣಲೆಯಿಂದ ತೆಗೆದಿರಿಸಿ. ಈಗ ನೇಂದ್ರ ಬಾಳೆಹಣ್ಣಿನ ಪೋಡಿ  ಸವಿಯಲು ಸಿದ್ಧ. ಇದು ಖಾರ ಮತ್ತು ಸಿಹಿಯ ಮಿಶ್ರ ರುಚಿಯನ್ನು ಹೊಂದಿರುತ್ತದೆ. ಚಟ್ನಿಯೊಂದಿಗೂ ಇದನ್ನು ಸವಿಯಬಹುದು.  

Sunday, 23 April 2017

ಹಲಸಿನ ಕಾಯಿ ಸೋಂಟೆ

ಬೇಕಾಗುವ ಸಾಮಾಗ್ರಿಗಳು : -
ಹಲಸಿನ ಕಾಯಿ 
ಉಪ್ಪು – 4 ಚಮಚ
ಮೆಣಸಿನ ಹುಡಿ – 2 ಚಮಚ
ಅರಶಿನದ ಹುಡಿ – 1 ಚಮಚ
ಇಂಗು - ಹುಣಿಸೆ ಬೀಜದಷ್ಟು
ಎಣ್ಣೆ – 1 ಲೀಟರ್

ಮಾಡುವ ವಿಧಾನ : -
ಬಲಿತ ಹಲಸಿನ ಕಾಯಿಯನ್ನು ಹಚ್ಚಿ ಇದರಿಂದ ಹಲಸಿನ ಸೊಳೆಯನ್ನು ಬೇರ್ಪಡಿಸಿ ನಂತರ ಹಲಸಿನ ಸೋಳೆಯನ್ನು ಉದ್ದಕ್ಕೆ ಸೋಂಟೆಯಂತೆ ತೆಳುವಾಗು ಹಚ್ಚಿಡಿ. ಒಂದು ಪಾತ್ರೆಯಲ್ಲಿ ಉಪ್ಪು, ಅರಶಿನದ ಹುಡಿ, ಮೆಣಸಿನ ಹುಡಿ ಮತ್ತು ಇಂಗು ಇವೆಲ್ಲವನ್ನೂ ಸೇರಿಸಿ  1/2 ಲೋಟ ನೀರು ಹಾಕಿ ಕಲಕಿ ಇಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿರಿಸಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ 2-3 ಹಿಡಿಯಷ್ಟು ಹಚ್ಚಿಟ್ಟ ಹಲಸಿನ ಸೋಳೆಯನ್ನು ಅದರಲ್ಲಿ ಹಾಕಿ ಕಾಯಿಸಿ. ಅರ್ಧ ಕಾಯುತ್ತಿರುವಾಗ ಕಲಸಿಟ್ಟ ಉಪ್ಪು, ಮೆಣಸಿನ ಹುಡಿ ಬೆರೆಸಿಟ್ಟ ನೀರನ್ನು ಸ್ವಲ್ಪ ಸ್ವಲ್ಪವೇ ಚಿಮಕಿಸಿ. ನಂತರ ಸೋಂಟೆ ಸರಿಯಾಗಿ ಕಾಯುವ ತನಕ ಮಗುಚುತ್ತಾ ಇರಿ. ಕಾದ ನಂತರ ಎಣ್ಣೆಯಿಂದ ತೆಗೆದು ಪೇಪರಿನ ಮೇಲೆ ಹರಡಿ. ತಣಿದ ಬಳಿಕ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಿಡಿ. ಈಗ ರುಚಿಯಾದ ಸೋಂಟೆ ತಿನ್ನಲು ರೆಡಿ. 

Sunday, 16 April 2017

ಬಾಳೆಕಾಯಿ ಚಿಪ್ಸ್

ಬೇಕಾಗುವ ಸಾಮಾಗ್ರಿಗಳು : -
ನೇಂದ್ರ ಬಾಳೆಕಾಯಿ – 4
ಉಪ್ಪು – ರುಚಿಗೆ ಬೇಕಷ್ಟು
ಮೆಣಸಿನ ಹುಡಿ – 2 ಚಮಚ 
ಅರಶಿನದ ಹುಡಿ – 1 ಚಮಚ
ಇಂಗು ನೀರು – 1 ಚಮಚ
ಎಣ್ಣೆ – 1/2 ಲೀಟರ್

ಮಾಡುವ ವಿಧಾನ : 
ಬಾಳೆಕಾಯಿಯನ್ನು ತೆಳುವಾಗಿ ಗಾಲಿಯಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಮೆಣಸಿನ ಹುಡಿ, ಅರಶಿನದ ಹುಡಿ, ಉಪ್ಪು, ಇಂಗು ಇವೆಲ್ಲವನ್ನೂ  ಸ್ವಲ್ಪ ನೀರು ಬೆರೆಸಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದನಂತರ ಕತ್ತರಿಸಿಟ್ಟ ಸ್ವಲ್ಪ ಬಾಳೆಕಾಯಿಯನ್ನು ಎಣ್ಣೆಗೆ ಹಾಕಿ ಕರಿಯಿರಿ. ಅರ್ಧ ಬೇಯುವಾಗ ಮಿಶ್ರಣ ಮಾಡಿಟ್ಟ ಉಪ್ಪು, ಮೆಣಸು, ಇಂಗು, ಅರಶಿನದ ನೀರನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದು ಅದಕ್ಕೆ ಚಿಮುಕಿಸಿರಿ. ಪುನಃ ಮಗುಚಿ. ಬಾಳೆಕಾಯಿ ಗರಿಗರಿಯಾದಾಗ ಎಣ್ಣೆಯಿಂದ ತೆಗೆದಿರಿಸಿ. ಈಗ ಬಾಳೆಕಾಯಿ ಚಿಪ್ಸ್ ತಿನ್ನಲು ರೆಡಿ. 

ಸಿಹಿಗೆಣಸು, ಬಟಾಟೆ ಅಥವಾ ದೀವಿಹಲಸಿನಕಾಯಿ (ಜೀಗುಜ್ಜೆ) ಇದರಿಂದಲೂ ಇದೇ ಮಾದರಿಯಲ್ಲಿ ಚಿಪ್ಸ್ಗಳನ್ನು ತಯಾರಿಸಬಹುದು.  

Saturday, 15 April 2017

ಕೊಚ್ಚುಪ್ಪಿನಕಾಯಿ

ಬೇಕಾಗುವ ಸಾಮಾಗ್ರಿಗಳು: -
ಮಾವಿನಕಾಯಿ – 5
ಕಲ್ಲುಪ್ಪು – 100 ಗ್ರಾಂ
ಒಣ ಮೆಣಸು – 200 ಗ್ರಾಂ
ಸಾಸಿವೆ – 100 ಗ್ರಾಂ
ಇಂಗು - ಹುಣಿಸೆಬೀಜದ ಗಾತ್ರದಷ್ಟು

ಮಾಡುವ ವಿಧಾನ : -
ಮಾವಿನ ಕಾಯಿಯನ್ನು ತೊಳೆದು ಒಣಬಟ್ಟೆಯಿಂದ ಚೆನ್ನಾಗಿ ಒರಸಿ. ಈಗ ಮಾವಿನ ಕಾಯಿಯನ್ನು ಸಣ್ಣಗೆ ಕೊಚ್ಚಿ ಒಂದು ಪಾತ್ರೆಗೆ ಹಾಕಿ ತೆಗೆದಿರಿಸಿ. ಉಪ್ಪನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ ನಂತರ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಉಪ್ಪು ಬಿಸಿಯಾದ ನಂತರ ಅದನ್ನು ಕೊಚ್ಚಿಟ್ಟ ಮಾವಿನ ಕಾಯಿಗೆ ಸೇರಿಸಿ ಚೆನ್ನಾಗಿ ಮಗುಚಿ ಮುಚ್ಚಿಡಿ. ಇಂಗನ್ನು ಎಣ್ಣೆಯಲ್ಲಿ ಕರಿಯಿರಿ. ಸಾಸಿವೆ ಮತ್ತು ಮೆಣಸನ್ನು ಬೇರೆ ಬೇರೆಯಾಗಿ ಮಿಕ್ಸಿಗೆ ಹಾಕಿ ಪುಡಿ ಮಾಡಿ ಇದರೊಂದಿಗೆ ಇಂಗನ್ನೂ ಸೇರಿಸಿ ಪುಡಿ ಮಾಡಿ. ಈ ಪುಡಿಗಳನ್ನು ಉಪ್ಪು ಬೆರೆಸಿಟ್ಟ ಮಾವಿನ ಕಾಯಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಯಾದ ಉಪ್ಪಿನ ಕಾಯಿ ರೆಡಿ. ಇದನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಿ. ನೀರು ತಾಗಿಸದ ಕಾರಣ ಇದು ಬೇಗ ಹಾಳಾಗುವುದಿಲ್ಲ. 

Wednesday, 29 March 2017

ಗುಳ್ಳ(ಬದನೆ) ಬೋಳ್ ಹುಳಿ

ಬೇಕಾಗುವ ಸಾಮಾಗ್ರಿಗಳು : -
ಗುಳ್ಳ – 2
ಹಸಿ ಮೆಣಸು – 4
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಇಂಗು ನೀರು – 2 ಚಮಚ
ಅರಶಿನ ಹುಡಿ - ಸ್ವಲ್ಪ

ಒಗ್ಗರಣೆಗೆ ; -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಗುಳ್ಳವನ್ನು ಸಣ್ಣದಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ. ಹಸಿಮೆಣಸನ್ನು ಉದ್ದ ಉದ್ದವಾಗಿ ಸೀಳಿ ಇಟ್ಟುಕೊಳ್ಳಿ. ಗುಳ್ಳದ ನೀರನ್ನು ಚೆಲ್ಲಿ ಹೋಳು ಮುಳುಗುವಷ್ಟು ಹೊಸ ನೀರು ಸೇರಿಸಿ ಬೇಯಲು ಇಡಿ. ಇದಕ್ಕೆ ಉಪ್ಪು, ಬೆಲ್ಲ, ಹುಳಿ ನೀರು, ಅರಶಿನದ ಹುಡಿ ಹಾಗೂ ಹೆಚ್ಚಿಟ್ಟ ಹಸಿಮೆಣಸನ್ನು ಸೇರಿಸಿ ಕುದಿಸಿರಿ. ಹೋಳುಗಳು ಬೆಂದ ನಂತರ ಕರಿಬೇವು ಸೊಪ್ಪು ಮತ್ತು ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಕುದಿಬರಿಸಿ ಇಂಗುನೀರು ಸೇರಿಸಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಕೊನೆಯಲ್ಲಿ ಒಗ್ಗರಣೆ ಹಾಕಿ ಮುಚ್ಚಿಡಿ. ಈಗ ಅತಿ ಸುಲಭ ವಿಧಾನದಲ್ಲಿ ತಯಾರಿಸಬಹುದಾದ ಸಾಂಬಾರ್ ರೆಡಿ. 

ಈರುಳ್ಳಿ-ಮೆಂತೆ ಗೊಜ್ಜು

ಬೇಕಾಗುವ ಸಾಮಾಗ್ರಿಗಳು : -
ಈರುಳ್ಳಿ – 4
ಮೆಂತೆ – 2 ಚಮಚ
ಒಣಮೆಣಸು – 10
ಉಪ್ಪು – ರುಚಿಗೆ ತಕ್ಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಎಣ್ಣೆ – 4 ಚಮಚ

ಮಾಡುವ ವಿಧಾನ : -
ಈರುಳ್ಳಿಯನ್ನು ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಈ ಕತ್ತರಿಸಿಟ್ಟ ಈರುಳ್ಳಿಯನ್ನು ಹುರಿದು ತೆಗೆದಿರಿಸಿ. ಇದೇ ಬಾಣಲೆಗೆ ಮೆಂತೆಯನ್ನು ಹಾಕಿ ಹುರಿದು ಈರುಳ್ಳಿ ಜೊತೆ ಹಾಕಿ. ನಂತರ ಒಣಮೆಣಸನ್ನು ಹುರಿದು ಈರುಳ್ಳಿಯೊಂದಿಗೆ ಸೇರಿಸಿ. ಇದು ತಣಿದ ನಂತರ ಇದಕ್ಕೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈಗ ರುಚಿಯಾದ ಈರುಳ್ಳಿ-ಮೆಂತೆ ಗೊಜ್ಜು ರೆಡಿ.

ಇದಕ್ಕೆ ನೀರು ಸೇರಿಸಬಾರದು. ನೀರು ಬೆರೆಸದ ಕಾರಣ ಒಂದು ವಾರ ಇಟ್ಟರೂ ಹಾಳಾಗುವುದಿಲ್ಲ. ಈ ಗೊಜ್ಜನ್ನು ಚಪಾತಿಯೊಂದಿಗೆ ಮತ್ತು ದೋಸೆಯೊಂದಿಗೆ ತಿನ್ನಲು ರುಚಿಯಾಗುತ್ತದೆ. ಮೆಂತೆ ಕಹಿ ಇರುವ ಕಾರಣಕ್ಕೆ ಇದಕ್ಕೆ ಬೆಲ್ಲ ಹಾಕಲಾಗುತ್ತದೆ. ಬೆಲ್ಲ ಬೆರೆಸದಿದ್ದರೂ ರುಚಿಯಾಗುತ್ತದೆ.  

ಸಿಹಿಗೆಣಸು ದೋಸೆ

ಬೇಕಾಗುವ ಸಾಮಾಗ್ರಿಗಳು: -
ಸಿಹಿಗೆಣಸು – 2
ಬೆಳ್ತಿಗೆ ಅಕ್ಕಿ – 1 ಲೋಟ
ತೆಂಗಿನ ಕಾಯಿ ತುರಿ – 1 ಕಪ್
ಒಣ ಮೆಣಸು – 4
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ಸಣ್ಣ ತುಂಡು
ಈರುಳ್ಳಿ – 1

ಮಾಡುವ ವಿಧಾನ : -
ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಸಿ ನಂತರ ಚೆನ್ನಾಗಿ ತೊಳೆದು ತೆಂಗಿನ ಕಾಯಿ ತುರಿ ಒಣಮೆಣಸು, ಉಪ್ಪು, ಹುಳಿ, ಬೆಲ್ಲ ಮತ್ತು ಈರುಳ್ಳಿ ಇವೆಲ್ಲವುಗಳನ್ನೂ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದ ಬರುವಷ್ಟು ನೀರಾಗಿರಲಿ. ಸಿಹಿಗೆಣಸನ್ನು ಚೆನ್ನಾಗಿ ತೊಳೆದು ತೆಳುವಾಗಿ ಗಾಲಿಯಾಕಾರದಲ್ಲಿ ಚಿಪ್ಸ್ ತರ ಕತ್ತರಿಸಿ ಇಟ್ಟುಕೊಳ್ಳಿ. ಒಲೆಯ ಮೇಲೆ ಕಾವಲಿ ಇಟ್ಟು ಕಾವಲಿ ಕಾದಾಗ ಕತ್ತರಿಸಿಟ್ಟ ಸಿಹಿಗೆಣಸುಗಳ ತುಂಡುಗಳನ್ನು ರುಬ್ಬಿಟ್ಟ ದೋಸೆ ಹಿಟ್ಟಿನಲ್ಲಿ ಮುಳುಗಿಸಿ ತೆಗೆದು ಕಾವಲಿಯಲ್ಲಿ ದೋಸೆಯಾಕಾರದಲ್ಲಿ ನೀಟಾಗಿ ಜೋಡಿಸಿ ಇಟ್ಟು ಮುಚ್ಚಿಡಿ. ಸ್ವಲ್ಪ ಕಾದಾಗ ಅದರ ಮೇಲೆ 2 ಚಮಚ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಿ ಮಗುಚಿ ಹಾಕಿ. ಎರಡೂ ಬದಿ ಕಾದ ನಂತರ ದೋಸೆಯು ಸವಿಯಲು ಸಿದ್ಧ. 

ಸಿಹಿ ಗೆಣಸಿನ ಬದಲು ಗುಳ್ಳ, ಹೀರೆಕಾಯಿ, ನೇಂದ್ರ ಬಾಳೆಹಣ್ಣು ಅಥವಾ ದೀವಿ ಹಲಸಿನ ಕಾಯಿಯನ್ನೂ ಬಳಸಬಹುದು. ಕುಂಬಳ ಕಾಯಿ ಹೂವುಗಳನ್ನು ಈ ದೋಸೆ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಯಲ್ಲಿ ಕಾಯಿಸಿದರೆ ವಿಶಿಷ್ಟ ರುಚಿಕರವಾದ ದೋಸೆ ರೆಡಿಯಾಗುತ್ತದೆ. 

Sunday, 19 March 2017

ಪೂರಿ-ಸಾಗು

ಬೇಕಾಗುವ ಸಾಮಾಗ್ರಿಗಳು : -
ಗೋಧಿ ಹಿಟ್ಟು – 1/4ಕೆಜಿ
ಬಟಾಟೆ –2
ಕ್ಯಾರೆಟ್ – 1
ಬೀನ್ಸ್ – 10
ತೆಂಗಿನಕಾಯಿ ತುರಿ – 1ಕಪ್
ಗರಂ ಮಸಾಲೆ ಪುಡಿ – 2 ಚಮಚ
ಉಪ್ಪು - ರುಚಿಗೆ ಬೇಕಷ್ಟು
ಎಣ್ಣೆ – 1/2 ಲೀಟರ್

ಪೂರಿ ಮಾಡುವ ವಿಧಾನ : -
ಗೋಧಿ ಹಿಟ್ಟನ್ನು ಸ್ವಲ್ಪ ಉಪ್ಪು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ. ಈಗ ಉಬ್ಬಿದ ಪೂರಿ ರೆಡಿ.

ಸಾಗು ಮಾಡುವ ವಿಧಾನ : -
ಬಟಾಟೆ, ಕ್ಯಾರೆಟ್, ಬೀನ್ಸ್ ಇವೆಲ್ಲವನ್ನೂ ಸಣ್ಣಗೆ ಹಚ್ಚಿ ಬೇಯಿಸಿ. ತೆಂಗಿನಕಾಯಿ ತುರಿಯೊಂದಿಗೆ ಗರಂ ಮಸಾಲೆ ಪುಡಿ ಬೆರೆಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಬೇಯಿಸಿಟ್ಟ ತರಕಾರಿಗೆ ಹಾಕಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿರಿ. ಹುಳಿಯ ಬದಲು ಒಂದು ಟೊಮೇಟೊ ಕತ್ತರಿಸಿ ಹಾಕಿ. ಈಗ ಸಾಗೂ ರೆಡಿ. ತರಕಾರಿಯೊಂದಿಗೆ ಬಟಾಣಿ ಕಾಳು ಹಾಕಿದರೆ ಇನ್ನೂ ರುಚಿಯಾಗಿರುತ್ತದೆ. 

ತೆಂಗಿನ ಕಾಯಿ ತುರಿಯೊಂದಿಗೆ ಗರಂ ಮಸಾಲೆ ಜೊತೆ ಸಣ್ಣ ತುಂಡು ಶುಂಠಿ ಮತ್ತು ಚೆಕ್ಕೆ ಹಾಕಿ ರುಬ್ಬಿ, ತರಕಾರಿಯೊಂದಿಗೆ ಕುದಿಸಿದರೆ ಸಾಗುವಿನ ರುಚಿಯು  ಇನ್ನಷ್ಟು ಹೆಚ್ಚುತ್ತದೆ. 

Wednesday, 8 March 2017

ಬೀಟ್ ರೂಟ್ ಪಲ್ಯ

ಬೇಕಾಗುವ ಸಾಮಾಗ್ರಿಗಳು : -
ಬೀಟ್‍ರೂಟ್ – 2
ತೆಂಗಿನಕಾಯಿ ತುರಿ – 1/2ಕಪ್
ಹಸಿಮೆಣಸು – 2
ಉಪ್ಪು – ರುಚಿಗೆ ಬೇಕಷ್ಟು

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಉದ್ದಿನ ಬೇಳೆ, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಬೀಟ್‍ರೂಟನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹಚ್ಚಿಡಿ. ಹಸಿಮೆಣಸನ್ನು ಸಣ್ಣಗೆ ಹಚ್ಚಿಕೊಳ್ಳಿ. ಒಲೆಯಲ್ಲಿ ಬಾಣಾಲೆ ಇಟ್ಟು ಅದರಲ್ಲಿ ಒಗ್ಗರಣೆ ಸಾಮಾಗ್ರಿಗಳನ್ನು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿದ ನಂತರ ಹಚ್ಚಿಟ್ಟ ಹಸಿಮೆಣಸು ಹಾಕಿ ನಂತರ ಕತ್ತರಿಸಿಟ್ಟ ಬೀಟ್‍ರೂಟನ್ನು ಹಾಕಿ ಮಗುಚಿರಿ. ಇದಕ್ಕೆ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಮಗುಚಿ ಬೇಯಲು ಬಿಡಿ. ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿರಿ. ಈಗ ಪಲ್ಯ ರೆಡಿ. 

Tuesday, 7 March 2017

ಸಿಹಿಗೆಣಸಿನ ಪಲ್ಯ

ಬೇಕಾಗುವ ಸಾಮಾಗ್ರಿಗಳು : -
ಸಿಹಿಗೆಣಸು – 4 ಗೆಡ್ಡೆ
ಈರುಳ್ಳಿ – 2
ಹಸಿಮೆಣಸು – 4
ಉಪ್ಪು – ರುಚಿಗೆ ಬೇಕಷ್ಟು
ತೆಂಗಿನಕಾಯಿ ತುರಿ – 1/2ಕಪ್

ಒಗ್ಗರಣೆಗೆ : -
ಎಣ್ಣೆ, ಜೀರಿಗೆ, ಸಾಸಿವೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು

ಮಾಡುವ ವಿಧಾನ : - 
ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಹೋಳುಗಳಾಗುವಂತೆ ಕತ್ತರಿಸಿ ಇಡಿ. ಒಂದು ಬಾಣಲೆಯಲ್ಲಿ ಒಗ್ಗರಣೆ ರೆಡಿಮಾಡಿ. ಒಗ್ಗರಣೆ ಸಿಡಿದಾಗ ಈರುಳ್ಳಿಯನ್ನು ಸಣ್ಣಗೆ ಹಚ್ಚಿಹಾಕಿ ಮಗುಚಿರಿ ನಂತರ ಹಸಿಮೆಣಸನ್ನೂ ಕತ್ತರಿಸಿ ಹಾಕಿ ಮಗುಚಿರಿ. ಕತ್ತರಿಸಿಟ್ಟ ಹಸಿಗೆಣಸನ್ನು ಹಾಕಿ ಉಪ್ಪು ಮತ್ತು 1/2ಲೋಟ ನೀರು ಹಾಕಿ ಮಗುಚಿ ಬೇಯಲು ಬಿಡಿ. ಆಗಾಗ ಮಗುಚುತ್ತಿರಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ ಮಗುಚಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಪಲ್ಯ ರೆಡಿ. ಬೇಯಿಸುವಾಗ ಸ್ವಲ್ಪ ಬೆಲ್ಲವನ್ನೂ ಹಾಕಿದರೆ ಇನ್ನಷ್ಟು ರುಚಿಯಾಗುತ್ತದೆ. 

Monday, 6 March 2017

ಮಾವಿನಕಾಯಿ ಅಡಂಗಾಯಿ ಉಪ್ಪಿನಕಾಯಿ

ಬೇಕಾಗುವ ಸಾಮಾಗ್ರಿಗಳು : -
ದೊಡ್ಡ ಮಾವಿನಕಾಯಿ – 4
ಉಪ್ಪು – 2 ಕಪ್
ಅರಶಿನ ಹುಡಿ – 1 ಚಮಚ
ಒಣಮೆಣಸು – 100 ಗ್ರಾಂ
ಸಾಸಿವೆ – 1 ಕಪ್
ಜೀರಿಗೆ – 1/2 ಕಪ್
ಮೆಂತೆ – 1/4ಕಪ್
ಇಂಗು - ಹುಣಿಸೆಬೀಜ ಗಾತ್ರದಷ್ಟು

ಮಾಡುವ ವಿಧಾನ : -
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಒಣಬಟ್ಟೆಯಿಂದ ಒರಸಿ ಹೋಳುಗಳಾಗಿ ಕತ್ತರಿಸಿ ಇಡಿ. ಒಂದು ಪಾತ್ರೆಯಲ್ಲಿ ಮಾವಿನ ಹೋಳುಗಳು ಮುಳುಗಲು ಬೇಕಾದಷ್ಟು ನೀರನ್ನು ಹಾಕಿ ಅರಶಿನ ಹುಡಿ, ಉಪ್ಪು ಹಾಕಿ ನೀರನ್ನು ಚೆನ್ನಾಗಿ ಕುದಿಸಿ. ನೀರು ಕುದಿದ ನಂತರ ಮಾವಿನ ಹೋಳುಗಳನ್ನು ಈ ನೀರಿಗೆ ಹಾಕಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಮಾವಿನ ಹೋಳುಗಳನ್ನು ಬೇಯಿಸಬಾರದು. ಕುದಿಸಿದ ನೀರಿಗೆ ಹಾಕಿದರೆ ಸಾಕು. ಬೇಯಿಸಿದರೆ ಹೋಳುಗಳ ಕರಗಿ ಹೋಗುತ್ತದೆ. 
ನಂತರ ಒಣಮೆಣಸು, ಸಾಸಿವೆ, ಜೀರಿಗೆ, ಮೆಂತೆ ಮತ್ತು ಇಂಗು ಇವೆಲ್ಲವನ್ನೂ ಎಣ್ಣೆ ಹಾಕಿ ಬೇರೆ ಬೇರೆಯಾಗಿ ಹುರಿಯಿರಿ. ಇದು ತಣಿದ ನಂತರ ಮಿಕ್ಸಿಗೆ ಹಾಕಿ ಹುಡಿ ಮಾಡಿ. ಈ ಹುಡಿಯನ್ನು ಬೇಯಿಸಿಟ್ಟ ಮಾವಿನ ಹೋಳುಗಳಿಗೆ ಹಾಕಿ ಮಿಕ್ಸ್ ಮಾಡಿ. ನೀರು ಹೆಚ್ಚಾಗುವಂತೆ ಕಂಡರೆ ಪುಡಿ ಬೆರೆಸುವ ಮೊದಲೇ ಸ್ವಲ್ಪ ನೀರನ್ನು ತೆಗೆಯಿರಿ. ಇದು ತುಂಬಾ ನೀರಾಗಬಾರದು. ನಂತರ ಬಾಟಲಿಯಲ್ಲಿ ಹಾಕಿಡಿ. ಈಗ ಅಡಂಗಾಯಿ ಉಪ್ಪಿನ ಕಾಯಿ ರೆಡಿ. 
ಮಾವಿನಕಾಯಿ ಬದಲು ಅಂಬಟೆ ಕಾಯಿ ಅಥವಾ ಲಿಂಬೆ ಹಣ್ಣನ್ನೂ ಬಳಸಬಹುದು.

Sunday, 5 March 2017

ಮೆಂತೆ ಸೊಪ್ಪಿನ ದೋಸೆ

ಬೇಕಾಗುವ ಸಾಮಾಗ್ರಿಗಳು : -
ಮೆಂತೆಸೊಪ್ಪು – 1 ಕಟ್ಟು
ಬೆಳ್ತಿಗೆ ಅಕ್ಕಿ – 1 ಲೋಟ
ತೆಂಗಿನಕಾಯಿ ತುರಿ – 1ಕಪ್
ಉಪ್ಪು – ರುಚಿಗೆ ಬೇಕಷ್ಟು
ಬೆಲ್ಲ - ಲಿಂಬೆಗಾತ್ರದಷ್ಟು
ಈರುಳ್ಳಿ – 1
ಒಣ ಮೆಣಸು - 4

 ಮಾಡುವ ವಿಧಾನ : -
ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಸಿ, ಚೆನ್ನಾಗಿ ತೊಳೆದು ಇದರೊಂದಿಗೆ ತೆಂಗಿನ ತುರಿ, ಉಪ್ಪು, ಬೆಲ್ಲ, ಈರುಳ್ಳಿ ಮತ್ತು ಒಣಮೆಣಸು ಇವೆಲ್ಲವನ್ನೂ ಒಟ್ಟಾಗಿ ಮಿಕ್ಸಿಗೆ ಹಾಕಿ ರುಬ್ಬಿ ದೋಸೆ ಹಿಟ್ಟಿನ ಹದದಷ್ಟು ನೀರು ಮಾಡಿಕೊಳ್ಳಿ. ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ದಂಟಿನಿಂದ ಬೇರ್ಪಡಿಸಿ, ಸೊಪ್ಪನ್ನು ಸಣ್ಣಗೆ ಹಚ್ಚಿ ರುಬ್ಬಿಟ್ಟ ದೋಸೆ ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ. ಈ ಹಿಟ್ಟನ್ನು ದೋಸೆ ಕಾವಲಿಯಲ್ಲಿ ನೀರು ದೋಸೆ ಹಾಕಿದಂತೆ ಹಾಕಿ ಎರಡೂ ಕಡೆ ಕಾಯಿಸಿ. ಬಿಸಿಬಿಸಿ ಇರುವಾಗಲೇ ಸವಿಯಿರಿ. 
ಇದು ರುಚಿಯಾಗೂ ಇರುತ್ತದೆ ಮತ್ತು ಆರೋಗ್ಯಕರವೂ ಹೌದು. 

Saturday, 25 February 2017

ಮಾವಿನ ಹಣ್ಣಿನ ಸಾಸೆಮಿ

ಬೇಕಾಗುವ ಸಾಮಾಗ್ರಿಗಳು : -
ಹುಳಿ ಮಾವಿನ ಹಣ್ಣು - 2
ತೆಂಗಿನ ಕಾಯಿ ತುರಿ – 1 ಕಪ್
ಒಣಮೆಣಸು – 6
ಸಾಸಿವೆ – 1 ಚಮಚ
ಬೆಲ್ಲ - ಲಿಂಬೆ ಗಾತ್ರದಷ್ಟು
ಉಪ್ಪು – ರುಚಿಗೆ ಬೇಕಷ್ಟು

ಒಗ್ಗರಣೆಗೆ: - 
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ತಿರುಳನ್ನು ತೆಂಗಿನ ಕಾಯಿ ತುರಿ ಜೊತೆ ಹಾಕಿ, ಇದಕ್ಕೆ ಒಣಮೆಣಸು, ಸಾಸಿವೆ, ಉಪ್ಪು, ಬೆಲ್ಲ ಇವೆಲ್ಲವನ್ನೂ ಹಾಕಿ ಮಿಕ್ಸಿಯಲ್ಲಿ ಹಾಕಿ ಗರಿಗರಿಯಾಗಿರುವಂತೆ ರುಬ್ಬಿಕೊಳ್ಳಿ. ಕೊನೆಯಲ್ಲಿ ಇದಕ್ಕೊಂದು ಒಗ್ಗರಣೆ ಕೊಡಿ. ಮಾವಿನ ಹಣ್ಣಿನ ಸಾಸೆಮಿ ರೆಡಿ. 

ಗುಳ್ಳ (ಬದನೆ) ಪಲ್ಯ

ಬೇಕಾಗುವ ಸಾಮಾಗ್ರಿಗಳು : -
ಗುಳ್ಳ – 2
ಉಪ್ಪು – ರುಚಿಗೆ ತಕ್ಕಷ್ಟು
ಹುಣಿಸೆಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ಲಿಂಬೆ ಗಾತ್ರದಷ್ಟು
ಸಾಂಬಾರ್ ಪುಡಿ – 4 ಚಮಚ
ಕರಿಬೇವು ಸೊಪ್ಪು – 2 ಎಸಳು

ಒಗ್ಗರಣೆಗೆ: -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು.

ಮಾಡುವ ವಿಧಾನ : - 
ಗುಳ್ಳವನ್ನು ತೆಳುವಾಗಿ ಹಚ್ಚಿ ನೀರಿನಲ್ಲಿ ಹಾಕಿಡಿ. ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ರೆಡಿ ಮಾಡಿ. ಸಾಸಿವೆ ಸಿಡಿದ ನಂತರ ಹಚ್ಚಿಟ್ಟ ಗುಳ್ಳವನ್ನು ನೀರಿನಿಂದ ತೆಗೆದು ಬಾಣಲೆಗೆ ಹಾಕಿ ಮಗಿಚುತ್ತಾ ಇರಿ. ನೀರು ಹಾಕಬಾರದು. ಇದಕ್ಕೆ ಉಪ್ಪು, ಹುಳಿ ನೀರು ಮತ್ತು ಬೆಲ್ಲ ಹಾಕಿ ಮಗುಚಿ. ಗುಳ್ಳ ಬೇಯುತ್ತ ಬಂದಾಗ ಸಾಂಬಾರಿನ ಹುಡಿ ಹಾಕಿ ಎಲ್ಲೆಡೆ ಹರಡುವಂತೆ ಮಿಶ್ರ ಮಾಡಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಪಲ್ಯ ರೆಡಿ. 

ಸೋರೆಕಾಯಿ ಪಾಯಸ

ಬೇಕಾಗುವ ಸಾಮಾಗ್ರಿಗಳು : -
ಸೋರೆಕಾಯಿ 1/4ಕೆಜಿ
ಹೆಸರುಬೇಳೆ – 1 ಲೋಟ
ಸಕ್ಕರೆ – 1/2ಲೋಟ
ಹಸುವಿನ ಹಾಲು – 1 ಲೋಟ
ಏಲಕ್ಕಿ – 2 ಎಸಳು

ಮಾಡುವ ವಿಧಾನ : - 
ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿ ಇಡಿ. ಸೋರೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣಗೆ ಹಚ್ಚಿ ಬೇಯಿಸಿಟ್ಟ ಹೆಸರು ಬೇಳೆಯೊಂದಿಗೆ ಹಾಕಿ ಬೇಯಿಸಿ. ಇದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಕುದಿಸಿರಿ. ಕೊನೆಯಲ್ಲಿ ಏಲಕ್ಕಿ ಪುಡಿ ಮಾಡಿ ಹಾಕಿ ಮುಚ್ಚಿಡಿ. ಈಗ ಸೋರೆಕಾಯಿ ಪಾಯಸ ಸವಿಯಲು ಸಿದ್ಧ.

ಹಸುವಿನ ಹಾಲಿನ ಬದಲು ತೆಂಗಿನ ಕಾಯಿ ಹಾಲು ಹಾಗೂ ಸಕ್ಕರೆ ಬದಲು ಬೆಲ್ಲ ಹಾಕಿಯೂ ಮಾಡಬಹುದು. 

Sunday, 19 February 2017

ಹುರುಳಿ ಚಟ್ನಿ

ಬೇಕಾಗುವ ಸಾಮಾಗ್ರಿಗಳು : -
ಹುರುಳಿ ಕಾಳು – 4 ಚಮಚ
ತೆಂಗಿನ ಕಾಯಿ ತುರಿ – 1 ಕಪ್
ಒಣಮೆಣಸು – 4
ಉಪ್ಪು – ರುಚಿಗೆ ತಕ್ಕಷ್ಟು
ಹುಣಿಸೆಹುಳಿ - ಹುಣಿಸೆಬೀಜದ ಗಾತ್ರದಷ್ಟು

ಮಾಡುವ ವಿಧಾನ : -
ಹುರುಳಿ ಕಾಳನ್ನು ಮತ್ತು ಒಣ ಮೆಣಸನ್ನು ಹುರಿದು ತೆಂಗಿನ ಕಾಯಿ ತುರಿಯೊಂದಿಗೆ ಹಾಕಿ ಇದಕ್ಕೆ ಉಪ್ಪು ಮತ್ತು ಹುಣಿಸೆಹುಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಹುರುಳಿಕಾಳು ಚಟ್ನಿ ಬಳಸಲು ಸಿದ್ಧ. ಗಂಜಿಯೊಂದಿಗೆ ನಂಜಿಕೊಳ್ಳಲು ಈ ಚಟ್ನಿಯು ತುಂಬಾ ರುಚಿಯಾಗಿರುತ್ತದೆ.


ಒಣ ಮೆಣಸಿನ ಬದಲು ಹಸಿಮೆಣಸು ಬಳಸಿದರೂ ಆಗುತ್ತದೆ. ಇದರ ರುಚಿಯೇ ಬೇರೆ.  

ತೊಂಡೆಕಾಯಿ ಮಜ್ಜಿಗೆಹುಳಿ

ಬೇಕಾಗುವ ಸಾಮಾಗ್ರಿಗಳು : -
ತೊಂಡೆಕಾಯಿ – 1/2ಕೆಜಿ
ತೆಂಗಿನಕಾಯಿ ತುರಿ – 1 ಕಪ್
ಹಸಿಮೆಣಸು – 4
ಜೀರಿಗೆ – 1 ಚಿಟಿಕೆ
ಕರಿಬೇವು ಸೊಪ್ಪು – 2 ಎಸಳು
ಮೊಸರು – 1 ಕಪ್
ಉಪ್ಪು – ರುಚಿಗೆ ಬೇಕಷ್ಟು

ಒಗ್ಗರಣೆಗೆ : -
ಎಣ್ಣೆ, ಒಣಮೆಣಸು, ಜೀರಿಗೆ, ಕರಿಬೇವು ಸೊಪ್ಪು

ಮಾಡುವ ವಿಧಾನ : -
ತೊಂಡೆಕಾಯಿಯನ್ನು ತೊಳೆದು ಹಚ್ಚಿ ನೀರು ಮತ್ತು ಉಪ್ಪು ಸೇರಿಸಿ ಒಲೆಯ ಮೇಲೆ ಬೇಯಲು ಇಡಿ. ತೆಂಗಿನಕಾಯಿ ತುರಿಗೆ ಹಸಿಮೆಣಸು ಮತ್ತು ಜೀರಿಗೆ ಕರಿಬೇವು ಸೊಪ್ಪನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ರುಬ್ಬಲು ನೀರು ಬಳಸುವ ಬದಲು ಮಜ್ಜಿಗೆ ಅಥವಾ ಮೊಸರನ್ನು ಬಳಸಿರಿ. ನುಣ್ಣಗೆ ರುಬ್ಬಿದ ಈ ಮಸಾಲೆಯನ್ನು ಬೇಯಿಸಿದ ತೊಂಡೆಕಾಯಿ ಜೊತೆ ಸೇರಿಸಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಕೊಟ್ಟು ಮುಚ್ಚಿಡಿ. ಮಜ್ಜಿಗೆ ಹುಳಿ ರೆಡಿ.

ತೊಂಡೆ ಕಾಯಿ ಬದಲು ಸೌತೆ ಕಾಯಿ, ಬೆಂಡೆ ಕಾಯಿ, ಸುವರ್ಣ ಗೆಡ್ಡೆ, ಬಾಳೆಕಾಯಿ, ಅಲಸಂಡೆ, ಬೀನ್ಸ್ ಅಥವಾ ದೀವಿ ಹಲಸಿನಕಾಯಿ ಇದರಲ್ಲೊಂದು ತರಕಾರಿಯನ್ನು ಬಳಸಬಹುದು. 

ಬೆಂಡೆಕಾಯಿ ಬೋಳುಹುಳಿ

ಬೇಕಾಗುವ ಸಾಮಾಗ್ರಿಗಳು : -
ಬೆಂಡೆಕಾಯಿ - 1/2ಕೆಜಿ
ಹಸಿಮೆಣಸು – 4
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆಹುಳಿ - ಹುಣಿಸೆಬೀಜದ ಗಾತ್ರದಷ್ಟು
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಇಂಗು ನೀರು – 2 ಚಮಚ
ಕರಿಬೇವು ಸೊಪ್ಪು – 2 ಎಸಳು

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು, ಇಂಗು

ಮಾಡುವ ವಿಧಾನ : -
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ನೀರಿನ ಅಂಶ ಹೋಗಲು ಒಂದು ಒಣ ಬಟ್ಟೆಯಿಂದ ಒರಸಿ. ನಂತರ ಬೆಂಡೆಕಾಯಿಯನ್ನು ಸಣ್ಣಗೆ ಹಚ್ಚಿ. ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಲೆಯಮೇಲಿಟ್ಟು ಈ ಹಚ್ಚಿಟ್ಟ ಬೆಂಡೆಕಾಯಿಯನ್ನು ಅದರಲ್ಲಿ ಹಾಕಿ ಹುರಿಯಿರಿ. ಇಲ್ಲದಿದ್ದರೆ ಬೆಂಡೆಕಾಯಿ ಲೋಳೆಯಗುತ್ತದೆ. ನಂತರ ಇದಕ್ಕೆ ಹಸಿಮೆಣಸು ಹಚ್ಚಿ ಹಾಕಿ. ಉಪ್ಪು, ಬೆಲ್ಲ, ಕರಿಬೇವು ಸೊಪ್ಪು, ಅರಶಿನ ಹುಡಿ, ಹುಣಿಸೆಹುಳಿ ನೀರು ಮತ್ತು ಇಂಗು ನೀರು ಸೇರಿಸಿ ಸ್ವಲ್ಪವೇ ನೀರು ಸೇರಿಸಿ ಕುದಿಸಿರಿ. ಕೊನೆಯಲ್ಲಿ ಇದಕ್ಕೊಂದು ಒಗ್ಗರಣೆ ಕೊಡಿ. ಬೆಂಡೆ ಬೋಳುಹುಳಿ ಬಳಸಲು ಸಿದ್ಧ.

ಬೆಂಡೆಯ ಬದಲು ಗುಳ್ಳ (ಬದನೆ ಕಾಯಿ), ಸೌತೆಕಾಯಿ, ಮುಳ್ಳು ಸೌತೆ ಇದರಲ್ಲಿ ಯಾವುದಾದರೊಂದು ತರಕಾರಿಯನ್ನು ಬಳಸಬಹುದು. ಇದಕ್ಕೆ ಹುಣಿಸೆಹುಳಿಯ ಬದಲು ಅಂಬಟೆ ಕಾಯಿ ಹಾಕಿದರೆ ಇನ್ನೂ ರುಚಿಯಾಗುತ್ತದೆ. 

Wednesday, 15 February 2017

ಮುಳ್ಳುಸೌತೆ ಸಾಸಿವೆ

ಬೇಕಾಗುವ ಸಾಮಾಗ್ರಿಗಳು : -
ಮುಳ್ಳುಸೌತೆ ಕಾಯಿ – 1
ತೆಂಗಿನ ಕಾಯಿ ತುರಿ – 1 ಕಪ್
ಒಣಮೆಣಸು – 4
ಸಾಸಿವೆ – 2 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ : -
ಎಣ್ಣೆ, ಮೆಣಸು, ಸಾಸಿವೆ, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಮುಳ್ಳುಸೌತೆ ಕಾಯಿಯನ್ನು ತೊಳೆದು ಸಣ್ಣಗೆ ಕೊಚ್ಚಿ ಇಡಿ. ತೆಂಗಿನಕಾಯಿ ತುರಿಗೆ ಮೆಣಸು, ಸಾಸಿವೆ ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಮಸಾಲೆಗೆ ಈಗಾಗಲೇ ಸಣ್ಣಗೆ ಕೊಚ್ಚಿಟ್ಟಿರುವ ಮುಳ್ಳುಸೌತೆ ಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ ಮುಚ್ಚಿಡಿ. ಅತಿ ಸರಳ ವಿಧಾನದ ಮುಳ್ಳುಸೌತೆ ಸಾಸಿವೆ ರೆಡಿ.  

Tuesday, 14 February 2017

ಪತ್ರೋಡೆ

ಬೇಕಾಗುವ ಸಾಮಾಗ್ರಿಗಳು : -
ಕೆಸುವಿನ ಎಲೆ – 10
ಬೆಳ್ತಿಗೆ ಅಕ್ಕಿ – 1 ಲೋಟ
ತೆಂಗಿನಕಾಯಿ ತುರಿ – 1 ಕಪ್
ಒಣಮೆಣಸು – 4
ಉದ್ದಿನ ಬೇಳೆ – 2 ಚಮಚ
ಕೊತ್ತಂಬರಿ – 2 ಚಮಚ
ಮೆಂತೆ – 1 ಚಮಚ
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ಲಿಂಬೆಹಣ್ಣು ಗಾತ್ರದಷ್ಟು
ಇಂಗು - ಹುಣಿಸೆಬೀಜ ಗಾತ್ರದಷ್ಟು

ಮಾಡುವ ವಿಧಾನ : -
ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದು ನಾರನ್ನು ತೆಗೆಯಿರಿ. ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಒಣಮೆಣಸು, ಉದ್ದಿನಬೇಳೆ, ಕೊತ್ತಂಬರಿ ಮತ್ತು ಮೆಂತೆಗಳನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಹುರಿದು ನೆನೆಸಿದ ಅಕ್ಕಿಯೊಂದಿಗೆ ಹಾಕಿ. ಇದಕ್ಕೆ ತೆಂಗಿನ ಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಇಂಗು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಇಡ್ಲಿ ಹಿಟ್ಟಿನ ಹದದಷ್ಟು ದಪ್ಪಗಿರಲಿ. ಈಗ ನಾರು ತೆಗೆದಿರಿಸಿದ ಕೆಸುವಿನ ಒಂದೊಂದೇ ಎಲೆಗೆ ಈ ಹಿಟ್ಟನ್ನು ಸವರಿ ಇನ್ನೊಂದು ಎಲೆಯನ್ನು ಅದರ ಮೇಲಿರಿಸಿ ಪುನಃ ಹಿಟ್ಟು ಸವರಿ ಚಾಪೆ ಮಡಿಚುವ ರೀತಿಯಲ್ಲಿ ಮಡಿಚಿರಿ. ಹೀಗೆ ಸುತ್ತಿಟ್ಟ ಪತ್ರೋಡೆಗಳನ್ನು ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಇಡ್ಲಿ ಬೇಯಿಸಿದಂತೆ ಹಬೆಯಲ್ಲಿ 1/2 ಗಂಟೆಗಳ ಕಾಲ ಬೇಯಿಸಿ. ಈಗ ಬಿಸಿ ಬಿಸಿ ಪತ್ರೋಡೆ ಕೊಬ್ಬರಿ ಎಣ್ಣೆಯೊಂದಿಗೆ ಸವಿಯಲು ಕೊಡಿ. 

ಪತ್ರೋಡೆ ಹೀಟ್ಟು ರುಬ್ಬುವಾಗ 1 ಈರುಳ್ಳಿ ಹಾಕಿದರೆ ಘಮಘಮವೆನ್ನುವ ಪರಿಮಳದೊಂದಿಗೆ ಪತ್ರೋಡೆಯು ಇನ್ನೂ ರುಚಿಯಾಗುತ್ತದೆ. ಇಡಿಹೆಸರು ಕಾಳನ್ನು ನೆನೆಸಿ ಅಕ್ಕಿಯೊಂದಿಗೆ ಹಾಕಬಹುದು. 

Monday, 13 February 2017

ಬಸಳೆ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಬಸಳೆಸೊಪ್ಪು ದಂಟು ಸಹಿತ – 1/4 ಕೆಜಿ
ತೊಗರಿ ಬೇಳೆ – 100 ಗ್ರಾಂ
ತೆಂಗಿನ ಕಾಯಿ ತುರಿ – 1 ಕಪ್
ಒಣ ಮೇಣಸು – 6
ಉದ್ದಿನ ಬೇಳೆ – 2 ಚಮಚ
ಕೊತ್ತಂಬರಿ – 1 ಚಮಚ
ಸಾಸಿವೆ – 2 ಚಿಟಿಕೆ
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಅರಶಿನಹುಡಿ – 2 ಚಿಟಿಕೆ

ಒಗ್ಗರಣೆಗೆ : -
ಬೆಳ್ಳುಳ್ಳಿ 1 ಗೆಡ್ಡೆ, ಸಾಸಿವೆ, ಮೆಣಸು, ಎಣ್ಣೆ

ಮಾಡುವ ವಿಧಾನ : - 
ಬಸಳೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ತೊಗರಿಬೇಳೆಯನ್ನು ಬೇಯಿಸಿ ಬಸಳೆ ಸೊಪ್ಪನ್ನು ಇದಕ್ಕೆ ಹಾಕಿ ಉಪ್ಪು, ಅರಶಿನ ಹುಡಿ ಮತ್ತು ಹುಣಿಸೆಹುಳಿ ನೀರನ್ನು ಹಾಕಿ ಬೇಯಿಸಿ. ತೆಂಗಿನ ಕಾಯಿ ತುರಿಗೆ ಮೆಣಸು, ಉದ್ದಿನಬೇಳೆ, ಕೊತ್ತಂಬರಿ ಹಾಗೂ ಸಾಸಿವೆಯನ್ನು ಹುರಿದು ಹಾಕಿ ಮಿಕ್ಸಿಯಲ್ಲಿ ಸಣ್ಣಗಾಗುವಂತೆ ರುಬ್ಬಿ ಬೇಯಿಸಿದ ಬಸಳೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆಗೆ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಜಜ್ಜಿ ಎಣ್ಣೆಯಲ್ಲಿ ಕಾಯಿಸಿ ಇದಕ್ಕೆ ಮೆಣಸು, ಸಾಸಿವೆ ಹಾಕಿ ಒಗ್ಗರಣೆಯನ್ನು ಈಗಾಗಲೇ ತಯಾರಿಸಿಟ್ಟ ಸಾಂಬಾರಿಗೆ ಹಾಕಿ ಮುಚ್ಚಿಡಿ. ಘಮಘಮಿಸುವ ಬಸಳೆ ಸಾಂಬಾರ್ ರೆಡಿ. 

ಬೆಳ್ಳುಳ್ಳಿಯ ಬದಲು ಈರುಳ್ಳಿ ಹಾಕಿದರೂ ಆಗುತ್ತದೆ. ಈರುಳ್ಳಿಯಾದರೆ ಬಸಳೆ ಬೇಯಿಸುವಾಗ ಅದರ ಜೊತೆ ಹಾಕಿ ಬೇಯಿಸಬೇಕು. ಇದಕ್ಕೆ ಬೆಳ್ಳುಳ್ಳಿಯ ಒಗ್ಗರಣೆ ಬದಲು ಸಾದಾ ಒಗ್ಗರಣೆ ಕೊಡಿ. 

Sunday, 12 February 2017

ಬಟಾಟೆ-ಈರುಳ್ಳಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಬಟಾಟೆ – 4
ಈರುಳ್ಳಿ – 2
ತೊಗರಿಬೇಳೆ – 1/2 ಲೋಟ
ಹುಣಿಸೆಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಸಾಂಬಾರ್ ಹುಡಿ – 4 ಚಮಚ
ಕೊತ್ತಂಬರಿ ಸೊಪ್ಪು – 2 ಎಸಳು
ಕರಿಬೇವು ಸೊಪ್ಪು – 2 ಎಸಳು
ಇಂಗುನೀರು – 2 ಚಮಚ

ಒಗ್ಗರಣೆಗೆ : - 
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು, ಇಂಗು

ಸಾಂಬಾರ್ ಪುಡಿಗೆ : -
ಒಣಮೆಣಸು 6, ಉದ್ದಿನಬೇಳೆ 4 ಚಮಚ, ಕೊತ್ತಂಬರಿ 2 ಚಮಚ

ಮಾಡುವ ವಿಧಾನ : - 
ಮೊದಲಿಗೆ ಒಣಮೆಣಸು, ಉದ್ದಿನಬೇಳೆ ಮತ್ತು ಕೊತ್ತಂಬರಿಗಳನ್ನು ಕೊಬ್ಬರಿ ಎಣ್ಣೆಹಾಕಿ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ಒಟ್ಟೂ ಸೇರಿಸಿ ಪುಡಿಮಾಡಿಟ್ಟುಕೊಳ್ಳಿ. ಬಟಾಟೆಯನ್ನು ಬೇಯಿಸಿ ಸಿಪ್ಪೆ ತೆಗೆದು ಕತ್ತರಿಸಿ ಇಟ್ಟುಕೊಳ್ಳಿ. ತೊಗರಿಬೇಳೆಯನ್ನು ಬೇಯಿಸಿಕೊಳ್ಳಿ. ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಬೇಯಿಸಿದ ತೊಗರಿಬೇಳೆಯನ್ನು ಹಾಕಿ ಅದಕ್ಕೆ ಕತ್ತರಿಸಿಟ್ಟ ಈರುಳ್ಳಿ ಮತ್ತು ಬೇಯಿಸಿದ ಬಟಾಟೆಗೆಳನ್ನು ಹಾಕಿ ಒಲೆಯ ಮೇಲಿರಿಸಿ ಬೇಯಲು ಬಿಡಿ. ಇದಕ್ಕೆ ಉಪ್ಪು, ಹುಣಿಸೆಹುಳಿ ನೀರು, ಅರಶಿನ ಹುಡಿ ಮತ್ತು ಸಣ್ಣ ತುಂಡು ಬೆಲ್ಲ ಹಾಕಿ ಕುದಿಸಿ. ನಂತರ ಈಗಾಗಲೇ ತಯಾರಿಸಿಟ್ಟ ಸಾಂಬಾರಿನ ಹುಡಿಯಿಂದ 4 ಚಮಚ ಹುಡಿಯನ್ನು ಹಾಕಿ ಕುದಿ ಬರಿಸಿ. ಬಳಿಕ ಇಂಗುನೀರು, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವುಸೊಪ್ಪು ಹಾಕಿ ಒಂದು ಕುದಿ ಬರಿಸಿ ಒಗ್ಗರಣೆ ಹಾಕಿ ಮುಚ್ಚಿಡಿ. ರುಚಿಕರವಾದ ಬಟಾಟೆ ಸಾಂಬಾರ್ ರೆಡಿ.
ಇದನ್ನು ಇಡ್ಲಿಯೊಂದಿಗೆ ಸವಿಯಲು ಬಲು ರುಚಿ. ದೊಸೆ, ಅನ್ನಗಳೊಂದಿಗೂ ಬಳಸಬಹುದು. 

Saturday, 11 February 2017

ಅಲಸಂಡೆ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಅಲಸಂಡೆ –      ¼ ಕೆಜಿ
ತೆಂಗಿನಕಾಯಿ ತುರಿ – 1 ಕಪ್
ಒಣಮೆಣಸು – 4
ಕೊತ್ತಂಬರಿ – 1 ಚಮಚ
ಉದ್ದಿನಬೇಳೆ – 2 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆ ಹುಳಿ ನೀರು 2 ಚಮಚ
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಅರಶಿನ ಹುಡಿ – 2 ಚಿಟಿಕೆ

ಒಗ್ಗರಣೆಗೆ : - ಎಣ್ಣೆ, ಮೆಣಸು, ಸಾಸಿವೆ, ಕರಿಬೇವಿ ಸೊಪ್ಪು, ಇಂಗು

ಮಾಡುವ ವಿಧಾನ : -
ಅಲಸಂಡೆಯನ್ನು ಚೆನ್ನಾಗಿ ತೊಳೆದು ಉದ್ದ ಉದ್ದವಾಗಿ ಹಚ್ಚಿ ಒಂದು ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಇದಕ್ಕೆ ಉಪ್ಪು, ಬೆಲ್ಲ, ಹುಣಿಸೆ ಹುಳಿಯ ನೀರು ಮತ್ತು ಅರಶಿನಹುಡಿ ಹಾಗೂ ಸ್ವಲ್ಪ ನೀರನ್ನು ಹಾಕಿ ಒಲೆಯ ಮೇಲೆ ಬೇಯಲು ಇಡಿ. ಒಣಮೆಣಸು, ಕೊತ್ತಂಬರಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ತೆಂಗಿನ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅಲಸಂಡೆ ಹೋಳು ಬೆಂದ ತಕ್ಷಣ ಈ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಒಂದು ಕುದಿ ಬರಿಸಿ ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಹಾಕಿ ಮುಚ್ಚಿಡಿ. ಅಲಸಂಡೆ ಸಾಂಬಾರ್ ರೆಡಿ.

Friday, 10 February 2017

ಚಪಾತಿ-ಬಾಜಿ

ಚಪಾತಿಗೆ ಬೇಕಾಗುವ ಸಾಮಾಗ್ರಿಗಳು : -
ಗೋಧಿಹಿಟ್ಟು – 2 ಲೋಟ
ಉಪ್ಪು – ರುಚಿಗೆ ಬೇಕಷ್ಟು

ಬಾಜಿಗೆ ಬೇಕಾಗುವ ಸಾಮಾಗ್ರಿಗಳು : -
ಬಟಾಟೆ – 4
ಈರುಳ್ಳಿ – 2
ಹಸಿಮೆಣಸು – 2
ಕರಿಬೇವು ಸೊಪ್ಪು – 1 ಎಸಳು
ಟೊಮೇಟೊ – 1
ಉಪ್ಪು – ರುಚಿಗೆ ಬೇಕಷ್ಟು
ಅರಶಿನ ಹುಡಿ – 1 ಚಿಟಿಕೆ

ಚಪಾತಿ ಮಾಡುವ ವಿಧಾನ : -
ಗೋಧಿ ಹಿಟ್ಟನ್ನು ಉಪ್ಪು ಹಾಕಿ ಬಿಸಿನೀರಿನಲ್ಲಿ ಲಟ್ಟಿಸಲು ಬರುವಂತೆ ಗಟ್ಟಿಯಾಗಿ ಕಲಸಿರಿ. 1 ಗಂಟೆ ಕಳೆದ ಬಳಿಕ ಈ ಹಿಟ್ಟನ್ನು ಉಂಡೆಗಳಾಗಿ ಮಾಡಿ ಚಪಾತಿ ಮಣೆಯಲ್ಲಿ ಲಟ್ಟಿಸಿರಿ. ಕಾವಲಿಯನ್ನು ಒಲೆಯ ಮೇಲಿರಿಸಿ ಚಪಾತಿ ಎರಡೂ ಬದಿಗೂ ಎಣ್ಣೆ ಹಾಕಿ ಕಾಯಿಸಿರಿ. ತುಪ್ಪ ಹಾಕಿ ಕಾಯಿಸಿದರೆ ಇನ್ನೂ ರುಚಿಯಾಗಿರುತ್ತದೆ. ಈಗ ಚಪಾತಿ ರೆಡಿ. 
ಚಪಾತಿ ಹಿಟ್ಟು ಕಲಸುವಾಗ 1 ಲಿಂಬೆ ಗಾತ್ರದಷ್ಟು ಬೆಣ್ಣೆ ಹಾಕಿ ಕಲಸಿದರೆ ಚಪಾತಿ ತುಂಬಾ ಮೃದುವಾಗಿರುತ್ತದೆ.  

ಬಾಜಿ ಮಾಡುವ ವಿಧಾನ : -
ಬಟಾಟೆಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಿ ಸಿಪ್ಪೆ ಸುಲಿದು ಹಿಚಿಕಿ ಪುಡಿಮಾಡಿ ಇಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸು, ಹಚ್ಚಿ ಇಡಿ. ಟೊಮೇಟೊವನ್ನು ಪ್ರತ್ಯೇಕವಾಗಿ ಹಚ್ಚಿ ತೆಗೆದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು, ಉದ್ದಿನ ಬೇಳೆ, ಅರಶಿನದ ಪುಡಿ ಹಾಕಿ ಒಗ್ಗರಣೆ ಮಾಡಿ ಈ ಒಗ್ಗರಣೆಗೆ ಹೆಚ್ಚಿಟ್ಟ ಈರುಳ್ಳಿ, ಕರಿಬೇವು ಸೊಪ್ಪು ಮತ್ತು ಹಸಿಮೆಣಸು ಹಾಕಿ ಮಗುಚಿರಿ. ನಂತರ ಟೊಮೇಟೊ ಹಾಕಿ ಮಗುಚುತ್ತಾ ಇರಿ. ಇದಕ್ಕೆ ಉಪ್ಪು ಮತ್ತು ಲಿಂಬೆರಸ ಹಾಕಿ ಚೆನ್ನಾಗಿ ಮಿಶ್ರವಾಗುವಂತೆ ಮಾಡಿ ಕೊನೆಯಲ್ಲಿ ಬೇಯಿಸಿ ಪುಡಿ ಮಾಡಿಟ್ಟ ಬಟಾಟೆಯನ್ನು ಹಾಕಿ ಸರಿಯಾಗಿ ಮಗುಚಿರಿ. ಸ್ವಲ್ಪ ನೀರನ್ನೂ ಹಾಕಬಹುದು. ಎಲ್ಲಾ ಕಡೆ ಉಪ್ಪು ಮತ್ತು ಲಿಂಬೆರಸ ಹರಡಲು ಇದು ಸಹಕಾರಿಯಾಗುತ್ತದೆ. ನೀರಿನಂಶ ಕಡಿಮೆಯಾದಾಗ ಕೊತ್ತಂಬರಿ ಸೊಪ್ಪನ್ನು ಹಚ್ಚಿ ಇದಕ್ಕೆ ಮಿಶ್ರ ಮಾಡಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಚಪಾತಿಯೊಂದಿಗೆ ಬಿಸಿಬಿಸಿ ಬಾಜಿ ಹಾಕಿ ತಿನ್ನಲು ಕೊಡಿ. 

Thursday, 9 February 2017

ವೆಜಿಟೇಬಲ್ ಸಲಾಡ್

ಬೇಕಾಗುವ ಸಾಮಾಗ್ರಿಗಳು : -
ಇಡಿ ಹೆಸರು – 1 ಹಿಡಿ
ಮುಳ್ಳು ಸೌತೆಕಾಯಿ – 1
ಈರುಳ್ಳಿ – 1
ಟೊಮೇಟೊ – 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಲಿಂಬೆರಸ – 2 ಚಮಚ
ಉಪ್ಪು – ರುಚಿಗೆ ಬೇಕಷ್ಟು
ಹಸಿಮೆಣಸು – 2
ಕ್ಯಾರೆಟ್ - 1

ಮಾಡುವ ವಿಧಾನ : -
ಇಡಿ ಹೆಸರನ್ನು ಮೊದಲನೇ ದಿನ ನೆನೆಯಿಸಿ ಮೊಳಕೆ ಬರಿಸಿ ಇಟ್ಟುಕೊಳ್ಳಿ. ಮುಳ್ಳು ಸೌತೆ, ಟೊಮೇಟೊ, ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿಸೊಪ್ಪುಗಳನ್ನು ಸಣ್ಣಗೆ ಹಚ್ಚಿ ಮೊಳಕೆ ಬರಿಸಿಟ್ಟ ಇಡಿಹೆಸರು ಕಾಳಿಗೆ ಹಾಕಿ. ಕ್ಯಾರೆಟನ್ನು ತುರಿದು ಇದರೊಂದಿಗೆ ಸೇರಿಸಿ. ಇದಕ್ಕೆ ಉಪ್ಪು ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಲ್ಲಿ ಒಗ್ಗರಣೆಯನ್ನು ಹಾಕಿ ಮುಚ್ಚಿಡಿ. ಒಗ್ಗರಣೆ ಹಾಕದಿದ್ದರೂ ಆಗುತ್ತದೆ. ಸಲಾಡ್ ರೆಡಿ. ಇದು ಆರೋಗ್ಯಕ್ಕೆ ಉತ್ತಮ. 

ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Wednesday, 8 February 2017

ಮೆಂತೆ ತಂಬುಳಿ

ಬೇಕಾಗುವ ಸಾಮಾಗ್ರಿಗಳು : -
ಮೆಂತೆ ಕಾಳು    – 1 ಚಮಚ
ಒಣಮೆಣಸಿನ ಕಾಯಿ – 2
ತೆಂಗಿನಕಾಯಿ ತುರಿ  – 1 ಕಪ್
ಉಪ್ಪು        - ರುಚಿಗೆ ತಕ್ಕಷ್ಟು
ಮೊಸರು    – 1 ಕಪ್

ಒಗ್ಗರಣೆಗೆ : -
ಎಣ್ಣೆ, ಮೆಣಸು, ಸಾಸಿವೆ, ಕರಿಬೇವು ಸೊಪ್ಪು


ಮಾಡುವ ವಿಧಾನ : -
ಮೆಂತೆಯನ್ನು ಒಗ್ಗರಣೆ ಸೌಟಿನಲ್ಲಿ ಹಾಕಿ 1 ಚಮಚ ಎಣ್ಣೆ ಹಾಕಿ ಹುರಿದು ಕೊಬ್ಬರಿ ತುರಿಯೊಂದಿಗೆ ಹಾಕಿಡಿ. ಒಣಮೆಣಸನ್ನೂ ಹುರಿದು ಕೊಬ್ಬರಿ ತುರಿಗೆ ಸೇರಿಸಿ. ಇದಕ್ಕೆ ಉಪ್ಪು ಬೆರೆಸಿ ಮಿಕ್ಸಿಗೆ ಹಾಕಿ ನಯವಾಗುವಂತೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಹಾಕುವ ಬದಲು ಮಜ್ಜಿಗೆ ಅಥವಾ ಮೊಸರನ್ನು ಉಪಯೋಗಿಸಿ. ನಂತರ ಒಂದು ಪಾತ್ರೆಗೆ ಹಾಕಿ ಮೊಸರು ಹಾಕಿ ಕದಡಿಸಿ. ಇದಕ್ಕೆ ಒಗ್ಗರಣೆ ಕೊಟ್ಟು ಮುಚ್ಚಿಡಿ. ಈಗ ಊಟದೊಂದಿಗೆ ಸವಿಯಲು ರುಚಿಯಾದ ಮತ್ತು ಆರೋಗ್ಯಕರವಾದ ಮೆಂತೆ ತಂಬುಳಿ ರೆಡಿ. 

Tuesday, 7 February 2017

ನುಗ್ಗೆಕಾಯಿ-ಗುಳ್ಳ ಸಾಂಬಾರ್


ಬೇಕಾಗುವ ಸಾಮಾಗ್ರಿಗಳು : -
ನುಗ್ಗೆಕಾಯಿ – 4
ಗುಳ್ಳ – 1
ಈರುಳ್ಳಿ – 2
ಕರಿಬೇವು ಸೊಪ್ಪು – 2 ಎಸಳು
ಕೊತ್ತಂಬರಿ ಸೊಪ್ಪು – 2 ಎಸಳು
ಇಂಗು ನೀರು 2 ಚಮಚ
ಉಪ್ಪು – ರುಚಿಗೆ ಬೇಕಷ್ಟು
ಹುಳಿ ನೀರು – 2 ಚಮಚ
ಬೆಲ್ಲ - ಲಿಂಬೆ ಗಾತ್ರದಷ್ಟು
ತೊಗರಿ ಬೇಳೆ – 1 ಲೋಟ
ಸಾಂಬಾರ್ ಪುಡಿ - 4 ಚಮಚ

ಸಾಂಬಾರ್ ಪುಡಿ ತಯಾರಿಸಲು : -
ಒಣಮೆಣಸು – 8
ಉದ್ದಿನ ಬೇಳೆ – 4 ಚಮಚ
ಕೊತ್ತಂಬರಿ – 2 ಚಮಚ

ಒಗ್ಗರಣೆಗೆ : - 
ಎಣ್ಣೆ, ಒಣಮೆಣಸು, ಸಾಸಿವೆ, ಕರಿಬೇವು ಸೊಪ್ಪು, ಉದ್ದಿನಬೇಳೆ, ಇಂಗು

ಮಾಡುವ ವಿಧಾನ : -
ಒಣಮೆಣಸು, ಉದ್ದಿನ ಬೇಳೆ ಮತ್ತು ಕೊತ್ತಂಬರಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ಸಾಂಬಾರಿನ ಪುಡಿ ಮಾಡಿಟ್ಟುಕೊಳ್ಳಿ. ಗುಳ್ಳವನ್ನು ಹೋಳುಗಳಾಗಿ ಮಾಡಿ ನೀರಿನಲ್ಲಿ ಹಾಕಿಡಿ. ನುಗ್ಗೆಕಾಯಿಯನ್ನು ಅದರ ಮೇಲಿನ ನಾರನ್ನು ತೆಗೆದು ಕತ್ತರಿಸಿ ಇಟ್ಟುಕೊಳ್ಳಿ ಮತ್ತು ಈರುಳ್ಳಿಯನ್ನೂ ಹೋಳುಗಳಾಗಿ ಕತ್ತರಿಸಿಡಿ. ಈಗ ತೊಗರಿ ಬೇಳೆಯನ್ನು ಅರಶಿನ ಹುಡಿ ಹಾಕಿ ಬೇಯಿಸಿ. ಇದಕ್ಕೆ ಗುಳ್ಳ, ನುಗ್ಗೆಕಾಯಿ ಮತ್ತು ಈರುಳ್ಳಿ ಹೋಳುಗಳನ್ನು ಹಾಕಿ ಬೇಯಲು ಇಡಿ. ಹೋಳು ಬೇಯುವಾಗ ಉಪ್ಪು, ಹುಳಿ ಮತ್ತು ಬೆಲ್ಲ ಹಾಕಿ ಕುದಿಸಿರಿ.  ಹೋಳು ಬೆಂದ ನಂತರ ಸಾಂಬಾರಿನ ಹುಡಿ ಹಾಕಿ ಕುದಿಸಿ. ಕೊನೆಯಲ್ಲಿ ಇಂಗುನೀರು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪುಗಳನ್ನು ಹಾಕಿ ಒಂದು ಕುದಿ ಬರಿಸಿ ಒಲೆಯಿಂದ ಕೆಳಗಿರಿಸಿ ಒಗ್ಗರಣೆ ಕೊಟ್ಟು ಮುಚ್ಚಿಡಿ. ಸಾಂಬಾರ್ ರೆಡಿ.

Monday, 6 February 2017

ಶಿರಾ (ಸ್ವೀಟ್)

ಬೇಕಾಗುವ ಸಾಮಾಗ್ರಿಗಳು : -
ಬೋಂಬೆ ರವೆ – 1 ಲೋಟ
ಸಕ್ಕರೆ        – 1 ಲೋಟ
ಏಲಕ್ಕಿ ಪುಡಿ   – 2 ಚಿಟಿಕೆ
ತುಪ್ಪ        – 1 ಲೋಟ
ಗೋಡಂಬಿ    - 1 ಹಿಡಿ
ಕೇಸರಿ ಬಣ್ಣದ ಹುಡಿ – 1 ಚಮಚ

ಮಾಡುವ ವಿಧಾನ : - 
ಒಂದು ಬಾಣಲೆಗೆ 4 ಚಮಚ ತುಪ್ಪ ಹಾಕಿ ಬೋಂಬೆ ರವೆಯನ್ನು ಹುರಿಯಿರಿ. ಹುರಿದ ನಂತರ 2 ಲೋಟ ನೀರು ಹಾಗೂ ಕೇಸರಿ ಬಣ್ಣದ ಹುಡಿ ಹಾಕಿ ಬೇಯಿಸಿ. ನಂತರ ಸಕ್ಕರೆ ಹಾಕಿ ಮಗುಚುತ್ತಾ ಇರಿ. ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿಗಳನ್ನು ಹಾಕಿ ಮಗುಚಿರಿ. ಇದು ಗಟ್ಟಿಯಾಗುತ್ತಾ ಬಂದಾಗ ತುಪ್ಪ ಹಾಕಿ ಮಗುಚಿ ಗಟ್ಟಿಯಾದಾಗ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ರುಚಿಯಾದ ಶಿರಾ ತಿನ್ನಲು ರೆಡಿ. (ಕೇಸರಿ ಬಣ್ಣದ ಹುಡಿ ಹಾಕದಿದ್ದರೂ ಆಗುತ್ತದೆ. ಬಣ್ಣ ಇರುವುದಿಲ್ಲ ಅಷ್ಟೆ)

ಶಿರಾ ತಯಾರಿಸುವಾಗ ಇದಕ್ಕೆ ಅನನಾಸು ಹಣ್ಣನ್ನು ಸಣ್ಣಗೆ ಹಚ್ಚಿ ಹಾಕಿದರೆ ಇನ್ನೊಂದು ರುಚಿಯ ಸುವಾಸನೆ ಭರಿತ ಶಿರಾ ರೆಡಿಯಾಗುತ್ತದೆ. 

ತುಪ್ಪ ಹಾಕಿ ಹುರಿದ ಬೋಂಬೆ ರವೆಗೆ ನೀರಿನ ಬದಲು ಹಾಲು ಹಾಕಿ ಬೇಯಿಸಿ ಬಾಳೆಹಣ್ಣನ್ನು ಸಣ್ಣಗೆ ಹಚ್ಚಿ ಹಾಕಿ ಸಕ್ಕರೆ, ಏಲಕ್ಕಿ, ತುಪ್ಪ ಹಾಕಿ ಮಗುಚಿದರೆ ಇದು ಸತ್ಯನಾರಾಯಣ ಪೂಜೆಗೆ ತಯಾರಿಸುವ ಸಪಾದ ಭಕ್ಷ್ಯ ವಾಗುತ್ತದೆ. 

ಅತ್ಯಂತ ಸರಳ ವಿಧಾನದಲ್ಲಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಈ ಸಿಹಿ ತಿನಿಸನ್ನು ನೀವೂ ತಯಾರಿಸಿ ನೋಡಿ. ನಿಮ್ಮ ಸ್ನೇಹಿರಿಗೂ ತಿಳಿಸಿ. 

Sunday, 5 February 2017

ಕಿತ್ತಳೆಹಣ್ಣಿನ ಸಿಪ್ಪೆಯ ಚಟ್ನಿಪುಡಿ

ಬೇಕಾಗುವ ಸಾಮಾಗ್ರಿಗಳು : -
ಕಿತ್ತಳೆ ಹಣ್ಣಿನ ಸಿಪ್ಪೆ - 1 ಕಿತ್ತಳೆಯದ್ದು
ಒಣ ಮೆಣಸು - 5
ಉದ್ದಿನ ಬೇಳೆ - 4 ಚಮಚ
ಕಡ್ಲೆಬೇಳೆ - 4 ಚಮಚ
ಉಪ್ಪು - 1 ಚಮಚ
ಹುಳಿಪುಡಿ - 1 ಚಮಚ

ಮಾಡುವ ವಿಧಾನ : -
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಅದರ ನೀರಿನ ಅಂಶ ಹೋಗುವ ತನಕ ಹುರಿಯಿರಿ. ನಂತರ ಒಣಮೆಣಸು, ಉದ್ದಿನಬೇಳೆ ಮತ್ತು ಕಡ್ಲೆಬೇಳೆಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ಈಗಾಗಲೇ ಹುರಿದಿಟ್ಟ ಕಿತ್ತಳೆ ಸಿಪ್ಪೆಯೊಂದಿಗೆ ಹಾಕಿ. ಇದಕ್ಕೆ ಉಪ್ಪು ಮತ್ತು ಹುಳಿ ಪುಡಿಗಳನ್ನು ಸೇರಿಸಿ ಇವೆಲ್ಲವನ್ನೂ ಒಟ್ಟಿಗೆ ಮಿಕ್ಸಿಗೆ ಹಾಕಿ ತರಿತರಿಯಾಗಿರುವಂತೆ ಪುಡಿ ಮಾಡಿ. ಈಗ ಕಿತ್ತಳೆಸಿಪ್ಪೆ ಚಟ್ನಿಪುಡಿ ರೆಡಿ. ಇದನ್ನು ಒಂದು ಬಾಟಲಿಯಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಿಡಿ. 15 ದಿನವಿಟ್ಟರೂ ಹಾಳಾಗುವುದಿಲ್ಲ. ತಯಾರಿಸಲು ತುಂಬಾ ಸುಲಭ ಹಾಗೂ ತಗಲುವ ವೆಚ್ಚವೂ ಕಡಿಮೆ.  ಈ ಚಟ್ನಿಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಕಲಸಿ ಬಳಸಬೇಕು. ತುಂಬಾ ಟೇಸ್ಟಿಯಾಗಿರುತ್ತದೆ. ಇಡ್ಲಿ, ದೋಸೆಗಳೊಂದಿಗೆ ತಿನ್ನಲು ರುಚಿ.

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. 

Saturday, 4 February 2017

ಎಳೆ ಹಲಸಿನಕಾಯಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಎಳೆ ಹಲಸಿನ ಕಾಯಿ - 1
ತೆಂಗಿನಕಾಯಿ ತುರಿ - 2 ಕಪ್
ಒಣಮೆಣಸು         - 5
ಜೀರಿಗೆ        - 2 ಚಿಟಿಕೆ
ಉಪ್ಪು        - ರುಚಿಗೆ ಬೇಕಷ್ಟು
ಅರಶಿನದ ಪುಡಿ - ಸ್ವಲ್ಪ

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು, ಉದ್ದಿನಬೇಳೆ.

ಮಾಡುವ ವಿಧಾನ :- 
ಹಲಸಿನ ಕಾಯಿಯನ್ನು ಸಿಪ್ಪೆ ತೆಗೆದು ಸಾಂಬಾರಿಗೆ ಬೇಕಾಗುವಷ್ಟು ದೊಡ್ಡ ಗಾತ್ರದ ಹೋಳುಗಳನ್ನಾಗಿ ಮಾಡಿ ಒಂದು ಪಾತ್ರೆಗೆ ಹಾಕಿ ಇದಕ್ಕೆ ನೀರು, ಅರಶಿನದ ಹುಡಿ, ಉಪ್ಪು, ಹುಣಿಸೆ ಹುಳಿ ಹಾಕಿ ಬೇಯಲು ಇಡಿ. ಈಗ  ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ಇದಕ್ಕೆ ಹಸಿಜೀರಿಗೆ ಮತ್ತು ಹುರಿದ ಒಣಮೆಣಸನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಲಸಿನಕಾಯಿಯ ಹೋಳು ಬೆಂದ ನಂತರ ರುಬ್ಬಿಟ್ಟ ಮಸಲೆಯನ್ನು ಅದಕ್ಕೆ ಸೇರಿಸಿ ಕುದಿಸಿರಿ. ನಂತರ ಒಗ್ಗರಣೆ ಹಾಕಿ ಮುಚ್ಚಿಡಿ. 

ಇನ್ನೊಂದು ವಿಧಾನ : -
ಎಲ್ಲಾ ವಿಧಾನಗಳು ಮೇಲಿನಂತೆಯೇ ಆದರೆ 1 ಕಪ್ ತೊಗರಿ ಬೇಳೆಯನ್ನು ಬೇಯಿಸಿ ಹಲಸಿನಕಾಯಿ ಕಡಿಯೊಂದಿಗೆ ಹಾಕಿ ಬೇಯಿಸಿ. ನಂತರ ಉಪ್ಪು, ಹುಳಿ, ಅರಸಿನ ರುಬ್ಬಿಟ್ಟ ಮಸಾಲೆ ಇವೆಲ್ಲವನ್ನೂ ಹಾಕಿ ಕುದಿಸಿರಿ ಹಾಗೂ ಒಗ್ಗರಣೆ ಕೊಟ್ಟು ಮುಚ್ಚಿಡಿ. 

ನಿಮ್ಮವರೊಂದಿಗೆ ಶೇರ್ ಮಾಡಿ. 

Friday, 3 February 2017

ಹುರುಳಿ ಸಾರು

ಬೇಕಾಗುವ ಸಾಮಾಗ್ರಿಗಳು : -
ಹುರುಳಿ ಕಾಳು   – 1 ಲೋಟ
ಹಸಿಮೆಣಸಿನಕಾಯಿ – 4
ಇಂಗು - ಹುಣಿಸೆಬೇಜದಷ್ಟು
ಉಪ್ಪು – ರುಚಿಗೆ ಬೇಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು

ಒಗ್ಗರಣೆಗೆ : - 
ಬೆಳ್ಳುಳ್ಳಿ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಹುರುಳಿ ಕಾಳನ್ನು ಕುಕ್ಕರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸಿದ ಹುರುಳಿ ಕಾಳನ್ನು ತಣಿದ ನಂತರ ಮಿಕ್ಸಿಗೆ ಹಾಕಿ ರುಬ್ಬಿ ನೀರು ಮಾಡಿ ಸೋಸಿ ಪಾತ್ರೆಗೆ ಹಾಕಿ ಒಲೆಯ ಮೇಲಿಡಿ ಇದಕ್ಕೆ ಉಪ್ಪು, ಹುಣಿಸೆಹುಳಿ, ಸಣ್ಣತುಂಡು ಬೆಲ್ಲ, ಅರಶಿನದ ಹುಡಿ ಹಾಗೂ ಸೀಳು ಮಾಡಿದ ಹಸಿಮೆಣಸಿನಕಾಯಿ ಇವೆಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಿರಿ. ಇಂಗು ನೀರು ಬೆರೆಸಿರಿ. ಈಗ ಒಗ್ಗರಣೆ ಮಾಡಿ ಬೆಳ್ಳುಳ್ಳಿಯನ್ನು ಜಜ್ಜಿ ಒಗ್ಗರಣೆಗೆ ಹಾಕಿ. ಈ ಬೆಳ್ಳುಳ್ಳಿ ಒಗ್ಗರಣೆಯನ್ನು ಈಗಾಗಲೇ ಕುದಿಸಿಟ್ಟ ಹುರುಳಿ ಸಾರಿಗೆ ಹಾಕಿ ಮುಚ್ಚಿಡಿ. ಘಮಘಮಿಸುವ ಹುರುಳಿ ಸಾರು ರೆಡಿ.

ತುಂಬ ಹುರುಳಿ ಕಾಳನ್ನು ಹಾಕಿ ಬೇಯಿಸಿದರೆ ಅದರ ನೀರು ಮಾತ್ರ ಸಾಕಗುತ್ತದೆ. ಹುರುಳಿ ಕಾಳು ಸ್ವಲ್ಪವೇ ಹಾಕಿದರೆ ಬೆಯಿಸಿದ ಮೇಲೆ ರುಬ್ಬಿಕೊಳ್ಳಿ. ಸಾರು ಸ್ವಲ್ಪ ದಪ್ಪಗಾಗುತ್ತದೆ. 

ಇನ್ನೊಂದು ವಿಧಾನ :-
ಎಲ್ಲಾ ಮೇಲಿನಂತೆಯೇ ಆದರೆ ಹಸಿಮೆಣಸಿನ ಬದಲು ಸಾರಿನ ಪುಡಿ 2 ಚಮಚ ಹಾಕಿ ಕುದಿಸಿರಿ. ಇನ್ನೊಂದು ರುಚಿಯ ಸಾರು ಸಿದ್ಧ.

Thursday, 2 February 2017

ಸಬ್ಬಸಿಗೆ ಸೊಪ್ಪಿನ ಮುದ್ದೆಹುಳಿ

ಬೇಕಾಗುವ ಸಾಮಾಗ್ರಿಗಳು : -
ಸಬ್ಬಸಿಗೆ ಸೊಪ್ಪು - 2 ಕಟ್ಟು
ಹೆಸರುಬೇಳೆ - 1 ಲೋಟ
ಹಸಿ ಮೆಣಸು - 4
ಉಪ್ಪು - ರುಚಿಗೆ ಬೇಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಅರಶಿನ ಹುಡಿ - ಸ್ವಲ್ಪ

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಉದ್ದಿನಬೇಳೆ

ಮಾಡುವ ವಿಧಾನ :- 
ಸಬ್ಬಸಿಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹಚ್ಚಿ ಇಟ್ಟುಕೊಳ್ಳಿ. ಹೆಸರು ಬೇಳೆಯನ್ನು ಅರಶಿನದ ಹುಡಿ ಹಾಕಿ ಬೇಯಿಸಿ ನಂತರ ಹಚ್ಚಿಟ್ಟ ಸಬ್ಬಸಿಗೆ ಸೊಪ್ಪನ್ನು ಅದಕ್ಕೆ ಹಾಕಿ, ಹಸಿಮೆಣಸನ್ನು ಹಚ್ಚಿ ಹಾಕಿ ಉಪ್ಪು, ಹುಣಿಸೆ ಹುಳಿ ನೀರು ಮತ್ತು ಬೆಲ್ಲ ಇವೆಲ್ಲವನ್ನೂ ಹಾಕಿ ಕುದಿ ಬರಿಸಿ. ಕೊನೆಯಲ್ಲಿ ಒಗ್ಗರಣೆ ಹಾಕಿ ಮುಚ್ಚಿಡಿ. ಇದು ತುಂಬಾ ನೀರಾಗಬಾರದು. 

ಸಬ್ಬಸಿಗೆ ಸೊಪ್ಪು ಮಲಬದ್ಧತೆ ನಿವಾರಣೆಗೆ ರಾಮಬಾಣ. 

ಅತಿ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ರೆಸಿಪಿಯನ್ನು ಮಾಡಿನೋಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ. 

Wednesday, 1 February 2017

ಮಾವಿನಕಾಯಿ ಚಟ್ನಿ

ಬೇಕಾಗುವ ಸಾಮಾಗ್ರಿಗಳು : -
ಮಾವಿನಕಾಯಿ - 1
ಹಸಿಮೆಣಸು - 5
ಉಪ್ಪು - ರುಚಿಗೆ ಬೇಕಷ್ಟು
ತೆಂಗಿನಕಾಯಿ ತುರಿ - 1 ಕಪ್
ಇಂಗು - ಹುಣಿಸೆಬೀಜದ ಗಾತ್ರದಷ್ಟು

ಮಾಡುವ ವಿಧಾನ : -
ಮಾವಿನಕಾಯಿಯನ್ನು ಹಚ್ಚಿ ಮಿಕ್ಸಿಗೆ ಹಾಕಿ ಇದರೊಂದಿಗೆ ಹಸಿಮೆಣಸು, ಉಪ್ಪು, ತೆಂಗಿನಕಾಯಿ ತುರಿ ಮತ್ತು ಇಂಗು ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ. ಸ್ವಲ್ಪ ನೀರುಹಾಕಿ ಗಟ್ಟಿ ಇರುವಂತೆ ರುಬ್ಬಿ. ರುಚಿಯಾದ ಬಾಯಲ್ಲಿ ನೀರಿಳಿಸುವಂತಹ ಮಾವಿನ ಕಾಯಿ ಚಟ್ನಿ ರೆಡಿ. ಇದನ್ನು ಗಂಜಿಯ ಜೊತೆ ಸವಿಯಲು ತುಂಬಾ ರುಚಿ. ಊಟದ ಜೊತೆಯಲ್ಲೂ ಇದನ್ನು ಬಳಸಬಹುದು. 

ಇನ್ನೊಂದು ವಿಧಾನ : -
ಹಚ್ಚಿದ ಮಾವಿನ ಕಾಯಿ ಇದರೊಂದಿಗೆ ಸ್ವಲ್ಪ ಉಪ್ಪು, 1 ಕಪ್ ತೆಂಗಿನಕಾಯಿ ತುರಿ, 2 ಚಮಚ ಸಾಸಿವೆ, 10 ಒಣಮೆಣಸು ಮತ್ತು ಸ್ವಲ್ಪ ಇಂಗು ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಈಗ ಬೇರೊಂದು ರುಚಿಯ ಮಾವಿನಕಾಯಿ ಚಟ್ನಿ ಸಿದ್ಧ. 

ಅತ್ಯಂತ ಸುಲಭ ಹಾಗೂ ಸರಳ ವಿಧಾನದ ರೆಸಿಪಿಗಳಿಗಾಗಿ ಪ್ರತಿದಿನ ಈ ಬ್ಲಾಗ್ ಲಿಂಕನ್ನು ತಪ್ಪದೇ ವೀಕ್ಷಿಸಿ. ನಿಮ್ಮ ಬಂಧುಗಳಿಗೆ ಮತ್ತು ಮಿತ್ರರಿಗೆ ಈ ಬ್ಲಾಗ್ ಲಿಂಕನ್ನು ವೀಕ್ಷಿಸಲು ತಿಳಿಸಿ. 

Tuesday, 31 January 2017

ಲಿಂಬೆಹಣ್ಣು ಉಪ್ಪಿನಕಾಯಿ

ಬೇಕಾಗುವ ಸಾಮಾಗ್ರಿಗಳು : -
ಲಿಂಬೆ ಹಣ್ಣು - 10
ಹಸಿಮೆಣಸು - 10
ಹಸಿ ಶುಂಠಿ - 100 ಗ್ರಾಂ
ಉಪ್ಪು - ¼ ಕೆಜಿ
ಅರಶಿನ ಹುಡಿ - 1 ಚಮಚ

ಮಾಡುವ ವಿಧಾನ : -
ಲಿಂಬೆಹಣ್ಣನ್ನು ತೊಳೆದು ನೀರಿಲ್ಲದಂತೆ ಒಣವಸ್ತ್ರದಿಂದ ಒರಸಿ, ಒಂದೊಂದು ಲಿಂಬೆಗಳನ್ನೂ ಸಾಧಾರಣ 8 ಹೋಳುಗಳಾಗುವಂತೆ ಕತ್ತರಿಸಿ ಇಟ್ಟುಕೊಳ್ಳಿ. ಕತ್ತರಿಸುವಾಗ ಇದರೊಳಗಿನ ಬೀಜ ತೆಗೆಯಿರಿ. ಹಸಿ ಮೆಣಸು ಮತ್ತು ಶುಂಠಿಗಳನ್ನೂ ಸಣ್ಣಗೆ ಹಚ್ಚಿ ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 4 ಲೋಟ ನೀರು ಹಾಕಿ ಅದಕ್ಕೆ ಉಪ್ಪು ಮತ್ತು ಅರಶಿನ ಹುಡಿ ಹಾಕಿ ಚೆನ್ನಾಗಿ ಕುದಿಸಿರಿ. ಈ ಕುದಿಸಿದ ಉಪ್ಪುನೀರನ್ನು ಒಲೆಯಿಂದ ಕೆಳಗಿರಿಸಿ ಇದಕ್ಕೆ ಹಚ್ಚಿಟ್ಟ ಲಿಂಬೆ ಹಣ್ಣು, ಹಸಿಮೆಣಸು ಮತ್ತು ಹಸಿಶುಂಠಿಗಳನ್ನು ಹಾಕಿ ಮಗುಚಿ ಮುಚ್ಚಿಡಿ. ಇದು ತಣಿದ ನಂತರ ಬಾಟಲಿಯಲ್ಲಿ ಹಾಕಿಡಿ. ಒಂದು ವಾರದ ನಂತರ ಉಪಯೋಗಿಸಲು ಸಿದ್ಧವಾಗುತ್ತದೆ. 

ಲಿಂಬೆಹಣ್ಣನ್ನು ಬೇಯಿಸಬಾರದು. ಬೇಯಿಸಿದರೆ ಲಿಂಬೆಹಣ್ಣು ಕರಗಿ ಹೋಗುತ್ತದೆ. ಅದಕ್ಕಾಗಿ ಕುದಿಸಿದ ಉಪ್ಪುನೀರಿಗೆ ಹಾಕಿ. 

ಇನ್ನೊಂದು ವಿಧಾನ : -
ಈ ಕತ್ತರಿಸಿಟ್ಟ ಲಿಂಬೆಯನ್ನು ಬಾಟಲಿಯಲ್ಲಿ ಹಾಕಿ ಉಪ್ಪು ಹಾಕಿ ಮುಚ್ಚಿಡಿ ವಾರಕ್ಕೊಮ್ಮೆ ಮಗುಚಿ ಪುನಃ ಮುಚ್ಚಿಡಿ. ಹೀಗೆ ಲಿಂಬೆಹಣ್ಣು ಉಪ್ಪಿನಲ್ಲಿ ಕೊಳೆಯುವ ತನಕ ಬಿಟ್ಟು ನಂತರ ಹಸಿಮೆಣಸು ಶುಂಠಿ ಹಾಕಿದರೂ ಆಗುತ್ತದೆ. ಒಣಮೆಣಸು, ಜೀರಿಗೆ, ಮೆಂತೆ, ಸಾಸಿವೆ ಇವುಗಳನ್ನು ಹುರಿದು ಪುಡಿ ಮಾಡಿ ಇದಕ್ಕೆ ಮಿಕ್ಸ್ ಮಾಡಿದರೂ ಆಗುತ್ತದೆ. ಇದಕ್ಕೆ 6 ತಿಂಗಳ ಕಾಲ ಕಾಯಬೇಕಾಗುತ್ತದೆ. ಆದರೆ ಮೇಲೆ ತಿಳಿಸಿದ ವಿಧಾನದಲ್ಲಿ 3-4 ದಿನಗಳಲ್ಲಿ ಉಪಯೋಗಿಸಬಹುದು. 


Monday, 30 January 2017

ಕ್ಯಾರೆಟ್ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು : -
ಕ್ಯಾರೆಟ್ - 1
ಹಾಲು - 1 ಲೋಟ
ಸಕ್ಕರೆ - 4 ಚಮಚ
ಏಲಕ್ಕಿ ಪುಡಿ - 1 ಚಿಟಿಕೆ


ಮಾಡುವ ವಿಧಾನ : -
ಕ್ಯಾರೆಟನ್ನು ಚೆನ್ನಾಗಿ ತೊಳೆದು ಕತ್ತರಿಸಿ ಬೇಯಿಸಿ, ಇದು ತಣಿದ ನಂತರ ಮಿಕ್ಸಿಗೆ ಹಾಕಿ ಸಣ್ಣಗಾಗುವಂತೆ ರುಬ್ಬಿ. ಇದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಕದಡಿರಿ. ಈಗ ಕ್ಯಾರೆಟ್ ಜ್ಯೂಸ್ ಕುಡಿಯಲು ಸಿದ್ಧ. 

ಬಿಸಿ ಬಿಸಿ ಹಾಲು ಬಳಸಿದರೆ ಚೆನ್ನಾಗಿರುತ್ತದೆ. ಇದನ್ನು ಕೋಲ್ಡ್ ಮಾಡಿ ಕುಡಿದರೆ ಇನ್ನೂ ಟೇಸ್ಟಿಯಾಗಿರುತ್ತದೆ.

ಕ್ಯಾರೆಟ್ ಜ್ಯೂಸ್ ಪ್ರತಿ ದಿನ ಕುಡಿದರೆ ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ. 
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 

Sunday, 29 January 2017

ಹಾಗಲಕಾಯಿ ಕಾಯಿರಸ


ಬೇಕಾಗುವ ಸಾಮಾಗ್ರಿಗಳು : -
ಹಾಗಲಕಾಯಿ - 2
ಬೆಲ್ಲ - ದೊಡ್ಡ ಲಿಂಬೆ ಗಾತ್ರದಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು - ರುಚಿಗೆ ಬೇಕಷ್ಟು
ಸಾರಿನ ಹುಡಿ - 2 ಚಮಚ
ಅರಶಿನದ ಹುಡಿ - ಸ್ವಲ್ಪ

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ಹಚ್ಚಿ ಬಾಣಲೆಯಲ್ಲಿ ಒಗ್ಗರಣೆ ತಯಾರಿಸಿ ಆ ಒಗ್ಗರಣೆಗೆ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ ಹುರಿಯಿರಿ. ಹಾಗಲಕಾಯಿ ಬೆನ್ನಾಗಿ ಬಾಡಿದ ನಂತರ ಅದಕ್ಕೆ ಹುಣಿಸೆ ಹುಳಿಯ ನೀರು, ಬೆಲ್ಲ, ಉಪ್ಪು. ಅರಶಿನ ಹುಡಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸಾರಿನಹುಡಿ ಹಾಕಿ ಕುದಿಸಿ. ಹುಣಿಸೆ ಹಣ್ಣಿನ ನೀರು ಮಾತ್ರ ಬಳಸಿರಿ. ತುಂಬಾ ನೀರಾಗಬಾರದು. ಈಗ ಕಾಯಿರಸ ಸಿದ್ಧ. ಕಹಿಯೆನಿಸಿದರೆ ಸ್ವಲ್ಪ ಬೆಲ್ಲದ ಪ್ರಮಾಣವನ್ನು ಜಾಸ್ತಿ ಮಾಡಿ. ಉಪ್ಪು-ಹುಳಿ, ಸಿಹಿ-ಕಹಿ ಮಿಶ್ರಿತವಾದ ವಿಶಿಷ್ಟ ರುಚಿ ಇದಕ್ಕಿರುತ್ತದೆ. ಆರೋಗ್ಯಕ್ಕೂ ಉತ್ತಮ. ಕಹಿಯೆಂದು ತಿನ್ನಲು ಒಪ್ಪದವರೂ ಇದನ್ನು ತಿನ್ನಲು ಇಷ್ಟ ಪಡುತ್ತಾರೆ. ಚಪಾತಿಯೊಂದಿಗೆ ಮತ್ತು ಊಟದೊಂದಿಗೆ ಇದನ್ನು ತಿನ್ನಲು ಬಲು ರುಚಿ.

ದಿನಕ್ಕೊಂದು ಇಂತಹ ಹೊಸಾ ರುಚಿಯ ರೆಸಿಪಿಗಾಗಿ ಪ್ರತಿದಿನ ಈ ಬ್ಲಾಗನ್ನು ವೀಕ್ಷಿಸಿ ನಿಮ್ಮ ಸ್ನೇಹಿತರಿಗೂ ತಿಳಿಸಿ. 

Saturday, 28 January 2017

ಮೂಲಂಗಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಮೂಲಂಗಿ - 4
ತೊಗರಿಬೇಳೆ - 2 ಹಿಡಿ
ತೆಂಗಿನ ತುರಿ - 1 ಕಪ್
ಒಣಮೆಣಸು - 6
ಕೊತ್ತಂಬರಿ - 1 ಚಮಚ
ಉದ್ದಿನಬೇಳೆ - 2 ಚಮಚ

ಒಗ್ಗರಣೆಗೆ : - 
ಎಣ್ಣೆ, ಸಾಸಿವೆ, ಮೆಣಸು ಕರಿಬೇವು ಸೊಪ್ಪು ಮತ್ತು ಉದ್ದಿನಬೇಳೆ

ಮಾಡುವ ವಿಧಾನ : - 
ಮೂಲಂಗಿಯನ್ನು ಚೆನ್ನಾಗಿ ತೊಳೆದು ಚಕ್ರದಾಕಾರ ಕತ್ತರಿಸಿಡಿ. ತೊಗರಿ ಬೇಳೆಯನ್ನು ಬೇಯಿಸಿ. (ಕುಕ್ಕರಿನಲ್ಲಿ ಹಾಕಿದರೆ ಬೇಗ ಬೇಯುತ್ತದೆ) ಈಗ ಒಣಮೆಣಸು, ಉದ್ದಿನಬೇಳೆ ಮತ್ತು ಕೊತ್ತಂಬರಿಯನ್ನು ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿ. ಒಂದು ಪಾತ್ರೆಯಲ್ಲಿ ಬೇಯಿಸಿದ ತೊಗರಿಬೇಳೆ ಮತ್ತು ಮೂಲಂಗಿ ಹೋಳುಗಳನ್ನು ಹಾಕಿ ಬೇಯಲು ಇಡಿ. ಇದಕ್ಕೆ ಉಪ್ಪು, ಹುಳಿ ಮತ್ತು ಸಣ್ಣ ತುಂಡು ಬೆಲ್ಲ ಹಾಗೂ ಅರಶಿನದ ಪುಡಿ ಹಾಕಿ ಬೇಯಿಸಿ. ಇದರ ಕಡಿ ಬೆಂದ ನಂತರ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ ಕರಿಬೇವು ಸೊಪ್ಪು ಹಾಕಿ ಮುಚ್ಚಿ ಒಲೆಯಿಂದ ಕೆಳಗಿರಿಸಿ. ನಂತರ ಎಣ್ಣೆ, ಸಾಸಿವೆ, ಮೆಣಸು ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ ಈ ಸಾಂಬಾರಿಗೆ ಹಾಕಿ ಮುಚ್ಚಿಡಿ. ಈಗ ಮೂಲಂಗಿ ಸಾಂಬಾರ್ ರೆಡಿ. 

ಮೂಲಂಗಿ ಬೇಯಿಸುವಾಗ ಬರುವ ವಾಸನೆಯನ್ನು ನಿವಾರಿಸಲು ಒಂದು ಅಥವಾ 2 ಈರುಳ್ಳಿಯನ್ನು ಹಚ್ಚಿ ಮೂಲಂಗಿಯೊಂದಿಗೆ ಹಾಕಿ ಬೇಯಿಸಿದರೆ ಮೂಲಂಗಿ ವಾಸನೆ ಬರುವುದಿಲ್ಲ. ಮೂಲಂಗಿಯು ಆರೋಗ್ಯಕ್ಕೆ ಉತ್ತಮ. ಮಲಬದ್ಧತೆ, ಮೂಲವ್ಯಾಧಿಗಳಿಂದ ಬಳಲುತ್ತಿರುವವರು ಮೂಲಂಗಿಯನ್ನು ಹಸಿಯಾಗಿ ಅಥವಾ ಸಾಂಬಾರ್ ಮಾಡಿ ಹೇಗಾದರೂ ಸೇವಿಸಿದರೆ ಉತ್ತಮ ಫಲ ದೊರೆಯುತ್ತದೆ.   

Friday, 27 January 2017

ಹೀರೆಕಾಯಿ ಪಲ್ಯ

ಬೇಕಾಗುವ ಸಾಮಾಗ್ರಿಗಳು:-
ಹೀರೆಕಾಯಿ - 2
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸು - 2
ಅರಶಿನ ಹುಡಿ - ಸ್ವಲ್ಪ

ಒಗ್ಗರಣೆ :-
 ಸಾಸಿವೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಮತ್ತು ಎಣ್ಣೆ

ಮಾಡುವ ವಿಧಾನ : -
ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲಿನ ನಾರನ್ನು ತೆಗೆದು ಚಕ್ರದಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಮತ್ತು ಎಣ್ಣೆ ಹಾಕಿ ಒಗ್ಗರಣೆ ಸಿಡಿದ ನಂತರ ಹಸಿಮೆಣಸು ಹಾಕಿ ಹುರಿಯಿರಿ ಈಗ ಇದಕ್ಕೆ ಕತ್ತರಿಸಿದ ಹೀರೆಕಾಯಿಯನ್ನು ಹಾಕಿ ಮಗುಚುತ್ತಾಇರಿ. ಇದಕ್ಕೆ ನೀರು ಬೆರೆಸುವ ಅಗತ್ಯ ಇರುವುದಿಲ್ಲ. ಕೊನೆಯಲ್ಲಿ ಉಪ್ಪು ಸೇರಿಸಿ ಮಗುಚಿ ಮುಚ್ಚಿಡಿ. ಈಗ ಅತಿ ಸರಳ ವಿಧಾನದಲ್ಲಿ ದಿಢೀರಾಗಿ ತಯಾರಿಸಿದ ಹೀರೇಕಾಯಿ ಪಲ್ಯ ರೆಡಿ. ತಯಾರಿಸಲು ಸುಲಭ. ತಿನ್ನಲೂ ರುಚಿ.
ತಮ್ಮ ಬಳಗದವರೊಂದಿಗೆ ಶೇರ್ ಮಾಡಿ. ಪ್ರತಿ ದಿನದ ಒಂದೊಂದು ಹೊಸ ಹೊಸ ರೆಸಿಪಿಗಾಗಿ ಈ ಬ್ಲಾಗ್ ನಿತ್ಯ ವೀಕ್ಷಿಸಿ.

Thursday, 26 January 2017

ಬಾಂಬೆರವೆ ಪಾಯಸ

ಬೇಕಾಗುವ ಸಾಮಾಗ್ರಿಗಳು: - 
ಬಾಂಬೆರವೆ - 100 ಗ್ರಾಂ
ಸಕ್ಕರೆ - 100 ಗ್ರಾಂ
ತುಪ್ಪ - 4 ಚಮಚ
ಹಾಲು - 1 ಲೋಟ


ಮಾಡುವ ವಿಧಾನ: -
ಬಾಣಲೆಯಲ್ಲಿ ಬಾಂಬೆ ರವೆಯನ್ನು ಹಾಕಿ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಬೇಯಿಸಿ 1 ಲೋಟದಷ್ಟು ನೀರನ್ನು ಹಾಕಿ ಕುದಿಸಿರಿ. ರವೆ ಬೆಂದ ನಂತರ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿರಿ. ಈಗ ರವೆ ಪಾಯಸ ಕುಡಿಯಲು ಸಿದ್ಧ. 
ಪ್ರತಿದಿನ 1 ಲೋಟ ರವೆ ಪಾಯಸ ಕುಡಿಯುವುದರಿಂದ ಮಹಿಳೆಯರ ಬೆನ್ನು ನೋವಿನ ಸಮಸ್ಯೆ ದೂರವಾಗುತ್ತದೆ. ಮತ್ತು ಸಣ್ಣಗಿರುವವರು ದಪ್ಪಗಾಗಲು ಇದು ತುಂಬಾ ಸಹಕಾರಿ. ಪ್ರತಿದಿನ ತಪ್ಪದೆ ಕುಡಿದರೆ ಮಾತ್ರ ಪರಿಹಾರ ಸಿಗುತ್ತದೆ. ಕೆಲವು ಕಡೆ ಬಾಣಂತಿಯರಿಗೆ ಇದನ್ನು ಪ್ರತಿದಿನ ಕೊಡಲಾಗುತ್ತದೆ. ಇದು ಔಷಧ ರೂಪದ ಪಾಯಸ.
ರುಚಿಗೋಸ್ಕರ ಬಳಸುವುದಾದಲ್ಲಿ ಇದಕ್ಕೆ ನೀರು ಬೆರೆಸದೆ ಕೇವಲ ಹಾಲಿನಿಂದ ಕುದಿಸಿ ಇದಕ್ಕೆ ಗೋಡಂಬಿ, ಏಲಕ್ಕಿ ಪುಡಿಯನ್ನು ಹಾಕಿ ಮತ್ತು ಕೇಸರಿ ದಳಗಳನ್ನೂ ಸೇರಿಸಬಹುದು. ಇದು ವಿಶಿಷ್ಟ ಸ್ವಾದಭರಿತವಾಗಿರುತ್ತದೆ. 
ಪ್ರತಿದಿನ ತಯಾರಿಸಲು ಸುಲಭವಾಗಬೇಕಾದಲ್ಲಿ ರವೆಯನ್ನು ಹುರಿದು ಬಾಟಲಿಯಲ್ಲಿ ಹಾಕಿಡಿ. ಈ ಹುರಿದಿಟ್ಟ ರವೆಯನ್ನು ದಿನಂಪ್ರತಿ 2 ಚಮಚ ತೆಗೆದು ಒಂದು ಲೋಟ ಹಾಲು ಬೆರೆಸಿ 4 ಚಮಚ ಸಕ್ಕರೆ ಹಾಕಿ ಕುದಿಸಿ ಕುಡಿಯಿರಿ. ಆರೋಗ್ಯಕ್ಕೂ ಉತ್ತಮ, ತಯಾರಿಸಲೂ ಸುಲಭ. 

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. 

Wednesday, 25 January 2017

ಟೊಮೇಟೊ ಸಲಾಡ್

ಬೇಕಾಗುವ ಸಾಮಾಗ್ರಿಗಳು : -
ಟೊಮೇಟೊ - 4
ಹಸಿಮೆಣಸು - 2
ಈರುಳ್ಳಿ - 1
ಶುಂಠಿ - ಸಣ್ಣ ತುಂಡು
ಕೊತ್ತಂಬರಿ ಸೊಪ್ಪು - ಎರಡು ಎಸಳು
ಇಂಗು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು  
ಮೊಸರು - 1 ಲೋಟ

ಮಾಡುವ ವಿಧಾನ : -
ಟೊಮೇಟೊ, ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಹಚ್ಚಿ ಒಂದು ಪಾತ್ರೆಗೆ ಹಾಕಿಡಿ. ಇದಕ್ಕೆ ಉಪ್ಪು, ಇಂಗು ನೀರು ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಕೊಟ್ಟು ಮುಚ್ಚಿಡಿ. ಈಗ ಅತಿ ಸರಳ ವಿಧಾನದ ಟೊಮೇಟೊ ಸಲಾಡ್ ರೆಡಿ. ಇದನ್ನು ಪುಲಾವ್‍ನೊಂದಿಗೆ ತಿನ್ನಲು ಬಳಸಬಹುದು. ಅನ್ನದೊಂದೊಂದಿಗೂ ಬೆರೆಸಿ ತಿನ್ನಲು ರುಚಿಯಾಗಿರುತ್ತದೆ. 
ಟೊಮೇಟೊ ಬದಲು ಎಳೆ ಮುಳ್ಳುಸೌತೆಯನ್ನು ಸಣ್ಣಗೆ ಹಚ್ಚಿ ಹಾಕಿಯೂ ಮಾಡಬಹುದು. ಟೊಮೇಟೊ ಮತ್ತು ಮುಳ್ಳುಸೌತೆ ಇವೆರಡನ್ನು ವಿಶ್ರಮಾಡಿ ಮಾಡಿದರೂ ರುಚಿಯಾಗುತ್ತದೆ. ಇದರೊಂದಿಗೆ ಮೊಳಕೆ ಬರಿಸಿದ ಇಡಿ ಹೆಸರುಕಾಳನ್ನು ಬೆರೆಸಿದರೆ ಇನ್ನೂ ರುಚಿ ಮತ್ತು ಆರೋಗ್ಯಕರ. 

ನೀವೂ ಮಾಡಿ ನೋಡಿ. ಇತರರೊಂದಿಗೂ ಹಂಚಿಕೊಳ್ಳಿ.

Tuesday, 24 January 2017

ಹಾಲುಬಾಯಿ (Rice Cake)

ಬೇಕಾಗುವ ಸಾಮಾಗ್ರಿಗಳು : -

ಬೆಳ್ತಿಗೆ ಅಕ್ಕಿ - 1 ಲೋಟ
ಬೆಲ್ಲ - ಕಿತ್ತಳೆ ಗಾತ್ರದಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಏಲಕ್ಕಿ - 4
ತೆಂಗಿನಕಾಯಿ ತುರಿ - 1 ಹಿಡಿ

ಮಾಡುವ ವಿಧಾನ : -


ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ನೆನೆದ ಅಕ್ಕಿಯೊಂದಿಗೆ ಉಪ್ಪು ಮತ್ತು ತೆಂಗಿನ ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಲಿ. ಇದಕ್ಕೆ ಬೆಲ್ಲ ಹಾಗೂ ಏಲಕ್ಕಿ ಹಾಕಿ ರುಬ್ಬಿ ಬಾಣಲೆಗೆ ಹಾಕಿಡಿ. ಈಗ ಈ ಹಿಟ್ಟನ್ನು ಒಲೆಯ ಮೇಲಿರಿಸಿ ಮಗುಚುತ್ತಾ ಇರಿ. ಹಿಟ್ಟು ದಪ್ಪಗಾಗುತ್ತಾ ಬರುತ್ತದೆ. ಹಲ್ವದ ಪಾಕದಷ್ಟು ದಪ್ಪಗಾದಾಗ ಒಲೆಯಿಂದ ಕೆಳಗಿರಿಸಿ ತುಪ್ಪ ಸವರಿದ ಬಾಳೆ ಎಲೆಯ ಮೇಲೆ ಹಾಕಿ ಹರಡಿರಿ. ಈಗ ಇದರ ಮೇಲೆಯೂ ತುಪ್ಪ ಸವರಿ. ಮೇಲ್ಭಾಗಕ್ಕೆ ಇನ್ನೊಂದು ತುಪ್ಪ ಸವರಿದ ಬಾಳೆ ಎಲೆಯನ್ನು ಮುಚ್ಚಿಡಿ. ತಣಿದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಾಳೆಎಲೆ ಇಲ್ಲದಲ್ಲಿ ತುಪ್ಪ ಸವರಿದ ಬಟ್ಟಲಿನಲ್ಲಿಯೂ ಹಾಕಬಹುದು. ಅಕ್ಕಿಯ ಬದಲು ರಾಗಿಯಿಂದಲೂ ಇದನ್ನು ತಯಾರಿಸಬಹುದು. 

ವಿವಿಧ ರುಚಿಯಾದ ರೆಸಿಪಿಗಾಗಿ ಪ್ರತಿದಿನ ಈ ಬ್ಲಾಗ್‍ನ್ನು ವೀಕ್ಷಿಸಿ ಮತ್ತು ನಿಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಿ.