Tuesday, 31 January 2017

ಲಿಂಬೆಹಣ್ಣು ಉಪ್ಪಿನಕಾಯಿ

ಬೇಕಾಗುವ ಸಾಮಾಗ್ರಿಗಳು : -
ಲಿಂಬೆ ಹಣ್ಣು - 10
ಹಸಿಮೆಣಸು - 10
ಹಸಿ ಶುಂಠಿ - 100 ಗ್ರಾಂ
ಉಪ್ಪು - ¼ ಕೆಜಿ
ಅರಶಿನ ಹುಡಿ - 1 ಚಮಚ

ಮಾಡುವ ವಿಧಾನ : -
ಲಿಂಬೆಹಣ್ಣನ್ನು ತೊಳೆದು ನೀರಿಲ್ಲದಂತೆ ಒಣವಸ್ತ್ರದಿಂದ ಒರಸಿ, ಒಂದೊಂದು ಲಿಂಬೆಗಳನ್ನೂ ಸಾಧಾರಣ 8 ಹೋಳುಗಳಾಗುವಂತೆ ಕತ್ತರಿಸಿ ಇಟ್ಟುಕೊಳ್ಳಿ. ಕತ್ತರಿಸುವಾಗ ಇದರೊಳಗಿನ ಬೀಜ ತೆಗೆಯಿರಿ. ಹಸಿ ಮೆಣಸು ಮತ್ತು ಶುಂಠಿಗಳನ್ನೂ ಸಣ್ಣಗೆ ಹಚ್ಚಿ ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 4 ಲೋಟ ನೀರು ಹಾಕಿ ಅದಕ್ಕೆ ಉಪ್ಪು ಮತ್ತು ಅರಶಿನ ಹುಡಿ ಹಾಕಿ ಚೆನ್ನಾಗಿ ಕುದಿಸಿರಿ. ಈ ಕುದಿಸಿದ ಉಪ್ಪುನೀರನ್ನು ಒಲೆಯಿಂದ ಕೆಳಗಿರಿಸಿ ಇದಕ್ಕೆ ಹಚ್ಚಿಟ್ಟ ಲಿಂಬೆ ಹಣ್ಣು, ಹಸಿಮೆಣಸು ಮತ್ತು ಹಸಿಶುಂಠಿಗಳನ್ನು ಹಾಕಿ ಮಗುಚಿ ಮುಚ್ಚಿಡಿ. ಇದು ತಣಿದ ನಂತರ ಬಾಟಲಿಯಲ್ಲಿ ಹಾಕಿಡಿ. ಒಂದು ವಾರದ ನಂತರ ಉಪಯೋಗಿಸಲು ಸಿದ್ಧವಾಗುತ್ತದೆ. 

ಲಿಂಬೆಹಣ್ಣನ್ನು ಬೇಯಿಸಬಾರದು. ಬೇಯಿಸಿದರೆ ಲಿಂಬೆಹಣ್ಣು ಕರಗಿ ಹೋಗುತ್ತದೆ. ಅದಕ್ಕಾಗಿ ಕುದಿಸಿದ ಉಪ್ಪುನೀರಿಗೆ ಹಾಕಿ. 

ಇನ್ನೊಂದು ವಿಧಾನ : -
ಈ ಕತ್ತರಿಸಿಟ್ಟ ಲಿಂಬೆಯನ್ನು ಬಾಟಲಿಯಲ್ಲಿ ಹಾಕಿ ಉಪ್ಪು ಹಾಕಿ ಮುಚ್ಚಿಡಿ ವಾರಕ್ಕೊಮ್ಮೆ ಮಗುಚಿ ಪುನಃ ಮುಚ್ಚಿಡಿ. ಹೀಗೆ ಲಿಂಬೆಹಣ್ಣು ಉಪ್ಪಿನಲ್ಲಿ ಕೊಳೆಯುವ ತನಕ ಬಿಟ್ಟು ನಂತರ ಹಸಿಮೆಣಸು ಶುಂಠಿ ಹಾಕಿದರೂ ಆಗುತ್ತದೆ. ಒಣಮೆಣಸು, ಜೀರಿಗೆ, ಮೆಂತೆ, ಸಾಸಿವೆ ಇವುಗಳನ್ನು ಹುರಿದು ಪುಡಿ ಮಾಡಿ ಇದಕ್ಕೆ ಮಿಕ್ಸ್ ಮಾಡಿದರೂ ಆಗುತ್ತದೆ. ಇದಕ್ಕೆ 6 ತಿಂಗಳ ಕಾಲ ಕಾಯಬೇಕಾಗುತ್ತದೆ. ಆದರೆ ಮೇಲೆ ತಿಳಿಸಿದ ವಿಧಾನದಲ್ಲಿ 3-4 ದಿನಗಳಲ್ಲಿ ಉಪಯೋಗಿಸಬಹುದು. 


Monday, 30 January 2017

ಕ್ಯಾರೆಟ್ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು : -
ಕ್ಯಾರೆಟ್ - 1
ಹಾಲು - 1 ಲೋಟ
ಸಕ್ಕರೆ - 4 ಚಮಚ
ಏಲಕ್ಕಿ ಪುಡಿ - 1 ಚಿಟಿಕೆ


ಮಾಡುವ ವಿಧಾನ : -
ಕ್ಯಾರೆಟನ್ನು ಚೆನ್ನಾಗಿ ತೊಳೆದು ಕತ್ತರಿಸಿ ಬೇಯಿಸಿ, ಇದು ತಣಿದ ನಂತರ ಮಿಕ್ಸಿಗೆ ಹಾಕಿ ಸಣ್ಣಗಾಗುವಂತೆ ರುಬ್ಬಿ. ಇದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಕದಡಿರಿ. ಈಗ ಕ್ಯಾರೆಟ್ ಜ್ಯೂಸ್ ಕುಡಿಯಲು ಸಿದ್ಧ. 

ಬಿಸಿ ಬಿಸಿ ಹಾಲು ಬಳಸಿದರೆ ಚೆನ್ನಾಗಿರುತ್ತದೆ. ಇದನ್ನು ಕೋಲ್ಡ್ ಮಾಡಿ ಕುಡಿದರೆ ಇನ್ನೂ ಟೇಸ್ಟಿಯಾಗಿರುತ್ತದೆ.

ಕ್ಯಾರೆಟ್ ಜ್ಯೂಸ್ ಪ್ರತಿ ದಿನ ಕುಡಿದರೆ ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ. 
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 

Sunday, 29 January 2017

ಹಾಗಲಕಾಯಿ ಕಾಯಿರಸ


ಬೇಕಾಗುವ ಸಾಮಾಗ್ರಿಗಳು : -
ಹಾಗಲಕಾಯಿ - 2
ಬೆಲ್ಲ - ದೊಡ್ಡ ಲಿಂಬೆ ಗಾತ್ರದಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು - ರುಚಿಗೆ ಬೇಕಷ್ಟು
ಸಾರಿನ ಹುಡಿ - 2 ಚಮಚ
ಅರಶಿನದ ಹುಡಿ - ಸ್ವಲ್ಪ

ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು

ಮಾಡುವ ವಿಧಾನ : -
ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ಹಚ್ಚಿ ಬಾಣಲೆಯಲ್ಲಿ ಒಗ್ಗರಣೆ ತಯಾರಿಸಿ ಆ ಒಗ್ಗರಣೆಗೆ ಹೆಚ್ಚಿಟ್ಟ ಹಾಗಲಕಾಯಿಯನ್ನು ಹಾಕಿ ಹುರಿಯಿರಿ. ಹಾಗಲಕಾಯಿ ಬೆನ್ನಾಗಿ ಬಾಡಿದ ನಂತರ ಅದಕ್ಕೆ ಹುಣಿಸೆ ಹುಳಿಯ ನೀರು, ಬೆಲ್ಲ, ಉಪ್ಪು. ಅರಶಿನ ಹುಡಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸಾರಿನಹುಡಿ ಹಾಕಿ ಕುದಿಸಿ. ಹುಣಿಸೆ ಹಣ್ಣಿನ ನೀರು ಮಾತ್ರ ಬಳಸಿರಿ. ತುಂಬಾ ನೀರಾಗಬಾರದು. ಈಗ ಕಾಯಿರಸ ಸಿದ್ಧ. ಕಹಿಯೆನಿಸಿದರೆ ಸ್ವಲ್ಪ ಬೆಲ್ಲದ ಪ್ರಮಾಣವನ್ನು ಜಾಸ್ತಿ ಮಾಡಿ. ಉಪ್ಪು-ಹುಳಿ, ಸಿಹಿ-ಕಹಿ ಮಿಶ್ರಿತವಾದ ವಿಶಿಷ್ಟ ರುಚಿ ಇದಕ್ಕಿರುತ್ತದೆ. ಆರೋಗ್ಯಕ್ಕೂ ಉತ್ತಮ. ಕಹಿಯೆಂದು ತಿನ್ನಲು ಒಪ್ಪದವರೂ ಇದನ್ನು ತಿನ್ನಲು ಇಷ್ಟ ಪಡುತ್ತಾರೆ. ಚಪಾತಿಯೊಂದಿಗೆ ಮತ್ತು ಊಟದೊಂದಿಗೆ ಇದನ್ನು ತಿನ್ನಲು ಬಲು ರುಚಿ.

ದಿನಕ್ಕೊಂದು ಇಂತಹ ಹೊಸಾ ರುಚಿಯ ರೆಸಿಪಿಗಾಗಿ ಪ್ರತಿದಿನ ಈ ಬ್ಲಾಗನ್ನು ವೀಕ್ಷಿಸಿ ನಿಮ್ಮ ಸ್ನೇಹಿತರಿಗೂ ತಿಳಿಸಿ. 

Saturday, 28 January 2017

ಮೂಲಂಗಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು : -
ಮೂಲಂಗಿ - 4
ತೊಗರಿಬೇಳೆ - 2 ಹಿಡಿ
ತೆಂಗಿನ ತುರಿ - 1 ಕಪ್
ಒಣಮೆಣಸು - 6
ಕೊತ್ತಂಬರಿ - 1 ಚಮಚ
ಉದ್ದಿನಬೇಳೆ - 2 ಚಮಚ

ಒಗ್ಗರಣೆಗೆ : - 
ಎಣ್ಣೆ, ಸಾಸಿವೆ, ಮೆಣಸು ಕರಿಬೇವು ಸೊಪ್ಪು ಮತ್ತು ಉದ್ದಿನಬೇಳೆ

ಮಾಡುವ ವಿಧಾನ : - 
ಮೂಲಂಗಿಯನ್ನು ಚೆನ್ನಾಗಿ ತೊಳೆದು ಚಕ್ರದಾಕಾರ ಕತ್ತರಿಸಿಡಿ. ತೊಗರಿ ಬೇಳೆಯನ್ನು ಬೇಯಿಸಿ. (ಕುಕ್ಕರಿನಲ್ಲಿ ಹಾಕಿದರೆ ಬೇಗ ಬೇಯುತ್ತದೆ) ಈಗ ಒಣಮೆಣಸು, ಉದ್ದಿನಬೇಳೆ ಮತ್ತು ಕೊತ್ತಂಬರಿಯನ್ನು ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿ. ಒಂದು ಪಾತ್ರೆಯಲ್ಲಿ ಬೇಯಿಸಿದ ತೊಗರಿಬೇಳೆ ಮತ್ತು ಮೂಲಂಗಿ ಹೋಳುಗಳನ್ನು ಹಾಕಿ ಬೇಯಲು ಇಡಿ. ಇದಕ್ಕೆ ಉಪ್ಪು, ಹುಳಿ ಮತ್ತು ಸಣ್ಣ ತುಂಡು ಬೆಲ್ಲ ಹಾಗೂ ಅರಶಿನದ ಪುಡಿ ಹಾಕಿ ಬೇಯಿಸಿ. ಇದರ ಕಡಿ ಬೆಂದ ನಂತರ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ ಕರಿಬೇವು ಸೊಪ್ಪು ಹಾಕಿ ಮುಚ್ಚಿ ಒಲೆಯಿಂದ ಕೆಳಗಿರಿಸಿ. ನಂತರ ಎಣ್ಣೆ, ಸಾಸಿವೆ, ಮೆಣಸು ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ ಈ ಸಾಂಬಾರಿಗೆ ಹಾಕಿ ಮುಚ್ಚಿಡಿ. ಈಗ ಮೂಲಂಗಿ ಸಾಂಬಾರ್ ರೆಡಿ. 

ಮೂಲಂಗಿ ಬೇಯಿಸುವಾಗ ಬರುವ ವಾಸನೆಯನ್ನು ನಿವಾರಿಸಲು ಒಂದು ಅಥವಾ 2 ಈರುಳ್ಳಿಯನ್ನು ಹಚ್ಚಿ ಮೂಲಂಗಿಯೊಂದಿಗೆ ಹಾಕಿ ಬೇಯಿಸಿದರೆ ಮೂಲಂಗಿ ವಾಸನೆ ಬರುವುದಿಲ್ಲ. ಮೂಲಂಗಿಯು ಆರೋಗ್ಯಕ್ಕೆ ಉತ್ತಮ. ಮಲಬದ್ಧತೆ, ಮೂಲವ್ಯಾಧಿಗಳಿಂದ ಬಳಲುತ್ತಿರುವವರು ಮೂಲಂಗಿಯನ್ನು ಹಸಿಯಾಗಿ ಅಥವಾ ಸಾಂಬಾರ್ ಮಾಡಿ ಹೇಗಾದರೂ ಸೇವಿಸಿದರೆ ಉತ್ತಮ ಫಲ ದೊರೆಯುತ್ತದೆ.   

Friday, 27 January 2017

ಹೀರೆಕಾಯಿ ಪಲ್ಯ

ಬೇಕಾಗುವ ಸಾಮಾಗ್ರಿಗಳು:-
ಹೀರೆಕಾಯಿ - 2
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸು - 2
ಅರಶಿನ ಹುಡಿ - ಸ್ವಲ್ಪ

ಒಗ್ಗರಣೆ :-
 ಸಾಸಿವೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಮತ್ತು ಎಣ್ಣೆ

ಮಾಡುವ ವಿಧಾನ : -
ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲಿನ ನಾರನ್ನು ತೆಗೆದು ಚಕ್ರದಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಮತ್ತು ಎಣ್ಣೆ ಹಾಕಿ ಒಗ್ಗರಣೆ ಸಿಡಿದ ನಂತರ ಹಸಿಮೆಣಸು ಹಾಕಿ ಹುರಿಯಿರಿ ಈಗ ಇದಕ್ಕೆ ಕತ್ತರಿಸಿದ ಹೀರೆಕಾಯಿಯನ್ನು ಹಾಕಿ ಮಗುಚುತ್ತಾಇರಿ. ಇದಕ್ಕೆ ನೀರು ಬೆರೆಸುವ ಅಗತ್ಯ ಇರುವುದಿಲ್ಲ. ಕೊನೆಯಲ್ಲಿ ಉಪ್ಪು ಸೇರಿಸಿ ಮಗುಚಿ ಮುಚ್ಚಿಡಿ. ಈಗ ಅತಿ ಸರಳ ವಿಧಾನದಲ್ಲಿ ದಿಢೀರಾಗಿ ತಯಾರಿಸಿದ ಹೀರೇಕಾಯಿ ಪಲ್ಯ ರೆಡಿ. ತಯಾರಿಸಲು ಸುಲಭ. ತಿನ್ನಲೂ ರುಚಿ.
ತಮ್ಮ ಬಳಗದವರೊಂದಿಗೆ ಶೇರ್ ಮಾಡಿ. ಪ್ರತಿ ದಿನದ ಒಂದೊಂದು ಹೊಸ ಹೊಸ ರೆಸಿಪಿಗಾಗಿ ಈ ಬ್ಲಾಗ್ ನಿತ್ಯ ವೀಕ್ಷಿಸಿ.

Thursday, 26 January 2017

ಬಾಂಬೆರವೆ ಪಾಯಸ

ಬೇಕಾಗುವ ಸಾಮಾಗ್ರಿಗಳು: - 
ಬಾಂಬೆರವೆ - 100 ಗ್ರಾಂ
ಸಕ್ಕರೆ - 100 ಗ್ರಾಂ
ತುಪ್ಪ - 4 ಚಮಚ
ಹಾಲು - 1 ಲೋಟ


ಮಾಡುವ ವಿಧಾನ: -
ಬಾಣಲೆಯಲ್ಲಿ ಬಾಂಬೆ ರವೆಯನ್ನು ಹಾಕಿ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಬೇಯಿಸಿ 1 ಲೋಟದಷ್ಟು ನೀರನ್ನು ಹಾಕಿ ಕುದಿಸಿರಿ. ರವೆ ಬೆಂದ ನಂತರ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿರಿ. ಈಗ ರವೆ ಪಾಯಸ ಕುಡಿಯಲು ಸಿದ್ಧ. 
ಪ್ರತಿದಿನ 1 ಲೋಟ ರವೆ ಪಾಯಸ ಕುಡಿಯುವುದರಿಂದ ಮಹಿಳೆಯರ ಬೆನ್ನು ನೋವಿನ ಸಮಸ್ಯೆ ದೂರವಾಗುತ್ತದೆ. ಮತ್ತು ಸಣ್ಣಗಿರುವವರು ದಪ್ಪಗಾಗಲು ಇದು ತುಂಬಾ ಸಹಕಾರಿ. ಪ್ರತಿದಿನ ತಪ್ಪದೆ ಕುಡಿದರೆ ಮಾತ್ರ ಪರಿಹಾರ ಸಿಗುತ್ತದೆ. ಕೆಲವು ಕಡೆ ಬಾಣಂತಿಯರಿಗೆ ಇದನ್ನು ಪ್ರತಿದಿನ ಕೊಡಲಾಗುತ್ತದೆ. ಇದು ಔಷಧ ರೂಪದ ಪಾಯಸ.
ರುಚಿಗೋಸ್ಕರ ಬಳಸುವುದಾದಲ್ಲಿ ಇದಕ್ಕೆ ನೀರು ಬೆರೆಸದೆ ಕೇವಲ ಹಾಲಿನಿಂದ ಕುದಿಸಿ ಇದಕ್ಕೆ ಗೋಡಂಬಿ, ಏಲಕ್ಕಿ ಪುಡಿಯನ್ನು ಹಾಕಿ ಮತ್ತು ಕೇಸರಿ ದಳಗಳನ್ನೂ ಸೇರಿಸಬಹುದು. ಇದು ವಿಶಿಷ್ಟ ಸ್ವಾದಭರಿತವಾಗಿರುತ್ತದೆ. 
ಪ್ರತಿದಿನ ತಯಾರಿಸಲು ಸುಲಭವಾಗಬೇಕಾದಲ್ಲಿ ರವೆಯನ್ನು ಹುರಿದು ಬಾಟಲಿಯಲ್ಲಿ ಹಾಕಿಡಿ. ಈ ಹುರಿದಿಟ್ಟ ರವೆಯನ್ನು ದಿನಂಪ್ರತಿ 2 ಚಮಚ ತೆಗೆದು ಒಂದು ಲೋಟ ಹಾಲು ಬೆರೆಸಿ 4 ಚಮಚ ಸಕ್ಕರೆ ಹಾಕಿ ಕುದಿಸಿ ಕುಡಿಯಿರಿ. ಆರೋಗ್ಯಕ್ಕೂ ಉತ್ತಮ, ತಯಾರಿಸಲೂ ಸುಲಭ. 

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. 

Wednesday, 25 January 2017

ಟೊಮೇಟೊ ಸಲಾಡ್

ಬೇಕಾಗುವ ಸಾಮಾಗ್ರಿಗಳು : -
ಟೊಮೇಟೊ - 4
ಹಸಿಮೆಣಸು - 2
ಈರುಳ್ಳಿ - 1
ಶುಂಠಿ - ಸಣ್ಣ ತುಂಡು
ಕೊತ್ತಂಬರಿ ಸೊಪ್ಪು - ಎರಡು ಎಸಳು
ಇಂಗು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು  
ಮೊಸರು - 1 ಲೋಟ

ಮಾಡುವ ವಿಧಾನ : -
ಟೊಮೇಟೊ, ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಹಚ್ಚಿ ಒಂದು ಪಾತ್ರೆಗೆ ಹಾಕಿಡಿ. ಇದಕ್ಕೆ ಉಪ್ಪು, ಇಂಗು ನೀರು ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಕೊಟ್ಟು ಮುಚ್ಚಿಡಿ. ಈಗ ಅತಿ ಸರಳ ವಿಧಾನದ ಟೊಮೇಟೊ ಸಲಾಡ್ ರೆಡಿ. ಇದನ್ನು ಪುಲಾವ್‍ನೊಂದಿಗೆ ತಿನ್ನಲು ಬಳಸಬಹುದು. ಅನ್ನದೊಂದೊಂದಿಗೂ ಬೆರೆಸಿ ತಿನ್ನಲು ರುಚಿಯಾಗಿರುತ್ತದೆ. 
ಟೊಮೇಟೊ ಬದಲು ಎಳೆ ಮುಳ್ಳುಸೌತೆಯನ್ನು ಸಣ್ಣಗೆ ಹಚ್ಚಿ ಹಾಕಿಯೂ ಮಾಡಬಹುದು. ಟೊಮೇಟೊ ಮತ್ತು ಮುಳ್ಳುಸೌತೆ ಇವೆರಡನ್ನು ವಿಶ್ರಮಾಡಿ ಮಾಡಿದರೂ ರುಚಿಯಾಗುತ್ತದೆ. ಇದರೊಂದಿಗೆ ಮೊಳಕೆ ಬರಿಸಿದ ಇಡಿ ಹೆಸರುಕಾಳನ್ನು ಬೆರೆಸಿದರೆ ಇನ್ನೂ ರುಚಿ ಮತ್ತು ಆರೋಗ್ಯಕರ. 

ನೀವೂ ಮಾಡಿ ನೋಡಿ. ಇತರರೊಂದಿಗೂ ಹಂಚಿಕೊಳ್ಳಿ.

Tuesday, 24 January 2017

ಹಾಲುಬಾಯಿ (Rice Cake)

ಬೇಕಾಗುವ ಸಾಮಾಗ್ರಿಗಳು : -

ಬೆಳ್ತಿಗೆ ಅಕ್ಕಿ - 1 ಲೋಟ
ಬೆಲ್ಲ - ಕಿತ್ತಳೆ ಗಾತ್ರದಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಏಲಕ್ಕಿ - 4
ತೆಂಗಿನಕಾಯಿ ತುರಿ - 1 ಹಿಡಿ

ಮಾಡುವ ವಿಧಾನ : -


ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ನೆನೆದ ಅಕ್ಕಿಯೊಂದಿಗೆ ಉಪ್ಪು ಮತ್ತು ತೆಂಗಿನ ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಲಿ. ಇದಕ್ಕೆ ಬೆಲ್ಲ ಹಾಗೂ ಏಲಕ್ಕಿ ಹಾಕಿ ರುಬ್ಬಿ ಬಾಣಲೆಗೆ ಹಾಕಿಡಿ. ಈಗ ಈ ಹಿಟ್ಟನ್ನು ಒಲೆಯ ಮೇಲಿರಿಸಿ ಮಗುಚುತ್ತಾ ಇರಿ. ಹಿಟ್ಟು ದಪ್ಪಗಾಗುತ್ತಾ ಬರುತ್ತದೆ. ಹಲ್ವದ ಪಾಕದಷ್ಟು ದಪ್ಪಗಾದಾಗ ಒಲೆಯಿಂದ ಕೆಳಗಿರಿಸಿ ತುಪ್ಪ ಸವರಿದ ಬಾಳೆ ಎಲೆಯ ಮೇಲೆ ಹಾಕಿ ಹರಡಿರಿ. ಈಗ ಇದರ ಮೇಲೆಯೂ ತುಪ್ಪ ಸವರಿ. ಮೇಲ್ಭಾಗಕ್ಕೆ ಇನ್ನೊಂದು ತುಪ್ಪ ಸವರಿದ ಬಾಳೆ ಎಲೆಯನ್ನು ಮುಚ್ಚಿಡಿ. ತಣಿದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಾಳೆಎಲೆ ಇಲ್ಲದಲ್ಲಿ ತುಪ್ಪ ಸವರಿದ ಬಟ್ಟಲಿನಲ್ಲಿಯೂ ಹಾಕಬಹುದು. ಅಕ್ಕಿಯ ಬದಲು ರಾಗಿಯಿಂದಲೂ ಇದನ್ನು ತಯಾರಿಸಬಹುದು. 

ವಿವಿಧ ರುಚಿಯಾದ ರೆಸಿಪಿಗಾಗಿ ಪ್ರತಿದಿನ ಈ ಬ್ಲಾಗ್‍ನ್ನು ವೀಕ್ಷಿಸಿ ಮತ್ತು ನಿಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಿ.

Monday, 23 January 2017

ಬನ್ಸ್

ಬೇಕಾಗುವ ಸಾಮಾಗ್ರಿಗಳು:-
ಮೈದಾಹಿಟ್ಟು - 1/4 ಕೆಜಿ
ಬಾಳೆಹಣ್ಣು - 4
ಸಕ್ಕರೆ  - 4 ಚಮಚ
ಉಪ್ಪು             - 2 ಚಿಟಿಕೆ
ಜೀರಿಗೆ - 1 ಚಮಚ
ಅಡುಗೆ ಸೋಡಾ - 1/4 ಚಮಚ
ಎಣ್ಣೆ - 1/2 ಲೀಟರ್


ಮಾಡುವ ವಿಧಾನ: -
ಬಾಳೆಹಣ್ಣನ್ನು ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು ಸಕ್ಕರೆ, ಜೀರಿಗೆ ಮತ್ತು ಅಡುಗೆ ಸೋಡ ಹಾಕಿ ಚೆನ್ನಾಗಿ ಹಿಚುಕಿ. ಸಕ್ಕರೆ ಬಾಳೆಹಣ್ಣಿನೊಂದಿಗೆ ಕರಗಿ ನೀರಾಗುತ್ತದೆ. ನಂತರ ಮೈದಾಹಿಟ್ಟು ಹಾಕಿ ಕಲಸಿ. ಚಪಾತಿ ಹಿಟ್ಟಿನಂತೆ ಚೆನ್ನಾಗಿ ಕಲಸಿ ಹದ ಮಾಡಿ. ಇದಕ್ಕೆ ನೀರು ಹಾಕುವಂತಿಲ್ಲ. ಗಟ್ಟಿಯೆನಿಸಿದರೆ ಸ್ವಲ್ಪ ಮೊಸರನ್ನು ಹಾಕಿ ಕಲಸಬಹುದು. ಅಥವಾ 2 ಬಾಳೆಹಣ್ಣನ್ನು ಜಾಸ್ತಿ ಹಾಕಿದರೆ ನೀರಿನಂಶ ಹೆಚ್ಚಾಗಿ ನಾದಲು ಸುಲಭವಾಗುತ್ತದೆ. ಈ ನಾದಿದ ಹಿಟ್ಟನ್ನು 6 ಗಂಟೆಗಳ ಹಾಗೆಯೇ ಮುಚ್ಚಿಡಿ. ನಂತರ ಚಪಾತಿಯ ಉಂಡೆಗಳಂತೆ ಉಂಡೆ ಮಾಡಿ ಸ್ವಲ್ಪವೇ ಲಟ್ಟಿಸಿ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಬಿಡಿ ಮತ್ತು ಮಗುಚುತ್ತಾ ಇರಿ. ಬನ್ಸ್ ಉಬ್ಬುತ್ತದೆ. ಅದನ್ನು ತಿರುವಿ ಹಾಕಿ ಕಾದ ನಂತರ ತೆಗೆದಿರಿಸಿ. ಈಗ ಬನ್ಸ್ ರೆಡಿ. ಇದನ್ನು ಚಟ್ನಿಯೊದಿಗೆ ಸವಿಯಲು ಕೊಡಿ. 

ಸೂಚನೆ: - ಇದರಲ್ಲಿ ಅಡುಗೆ ಸೋಡ ಬಳಸುವುದರಿಂದ ಬನ್ಸ್ ಚೆನ್ನಾಗಿ ಉಬ್ಬತ್ತದೆ ಮತ್ತು ಬನ್ಸ್ ಒಳಗಡೆ ಪದರ ಪದರವಾಗಿರುತ್ತದೆ. ಇದರ ಹಿಟ್ಟಿಗೆ ನೀರು ಅಥವಾ ಮೊಸರು ಬಳಸದೇ ಕೇವಲ ಬಾಳೆಹಣ್ಣು ಹೆಚ್ಚಿಗೆ ಹಾಕಿ ಕಲಸಿದರೆ ಕಾಯಿಸುವಾಗ ಸ್ವಲ್ಪವೂ ಎಣ್ಣೆಯನ್ನು ಹೀರುವುದಿಲ್ಲ. ಮೈದಾಹಿಟ್ಟಿನ ಬದಲು ಗೋಧಿ ಹಿಟ್ಟನ್ನು ಉಪಯೋಗಿಸಬಹುದು. 
ವಿವಿಧ ಬಗೆಯ ರೆಸಿಪಿಗೋಸ್ಕರ ಪ್ರತಿ ದಿನ ಈ ಬ್ಲಾಗ್ ವೀಕ್ಷಿಸಿ. ನಿಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಿ.

Sunday, 22 January 2017

ಗುಳ್ಳ (ಬದನೆ) ಮೊಸರು ಗೊಜ್ಜು

ಬೇಕಾಗುವ ಸಾಮಾಗ್ರಿಗಳು: -
ಗುಳ್ಳ (ಬದನೆ)     - 1
ಮೊಸರು - 1 ಲೋಟ
ಈರುಳ್ಳಿ - 1
ಹಸಿಮೆಣಸು - 2
ಶುಂಠಿ - ಸಣ್ಣತುಂಡು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಇಂಗು - ಸ್ವಲ್ಪ
ಉಪ್ಪು - ರುಚಿಗೆ ಬೇಕಷ್ಟು

ಒಗ್ಗರಣೆಗೆ: - ಎಣ್ಣೆ, ಸಾಸಿವೆ, ಒಣಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು

ಮಾಡುವ ವಿಧಾನ : - 
ಗುಳ್ಳ (ಬದನೆ)ಯನ್ನು ಇಡಿಯಾಗಿ ಬೇಯಿಸಿ ಇಟ್ಟುಕೊಳ್ಳಿ. ಗುಳ್ಳ ತಣಿದ ನಂತರ ಅದರ ಮೇಲಿನ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿ ಹಾಕಿ. ಇದರೊಂದಿಗೆ ಉಪ್ಪು, ಇಂಗು ನೀರು ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಹಿಚುಕಿ. ಕೊನೆಯಲ್ಲಿ ಒಗ್ಗರಣೆಯನ್ನು ತಯಾರಿಸಿ ಗೊಜ್ಜಿಗೆ ಹಾಕಿ ಮುಚ್ಚಿಡಿ. ಅನ್ನದೊಂದಿಗೆ ಸವಿಯಲು ಬಲು ರುಚಿ ಮತ್ತು ದಿಡೀರ್ ಆಗಿ ತಯಾರಿಸಬಹುದು. ಗುಳ್ಳವನ್ನು ಬೇಯಿಸುವ ಬದಲು ಕೆಂಡದಲ್ಲಿ ಸುಟ್ಟರೆ ಇನ್ನೂ ರುಚಿಯಾಗಿರುತ್ತದೆ. ಇದಕ್ಕೆ ಮಟ್ಟಿನ ಗುಳ್ಳವನ್ನು ಬಳಸಿದರೆ ರುಚಿಯು ಅದ್ಭುತವಾಗಿರುತ್ತದೆ. 
ಇದನ್ನು ತಯಾರಿಸಲು ಗುಳ್ಳದ ಬದಲು ಬಟಾಟೆ ಅಥವಾ ಸಿಹಿಗೆಣಸು ಅಥವಾ ದೀವಿ ಹಲಸಿನಕಾಯಿ ಇದರಲ್ಲಿ ಯಾವುದಾದರೊಂದನ್ನೂ ಬಳಸಿಕೊಳ್ಳಬಹುದು. ಈರುಳ್ಳಿ ಇಷ್ಟ ಪಡದೇ ಇರುವವರು ಈರುಳ್ಳಿಯನ್ನು ಹಾಕದೆಯೂ ಮಾಡಬಹುದು. 


ಹೊಸಹೊಸ ರುಚಿಗಾಗಿ ಪ್ರತಿದಿನ ಈ ಬ್ಲಾಗ್‍ನ್ನು ವೀಕ್ಷಿಸಿ ಮತ್ತು ನಿಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಿ.

Saturday, 21 January 2017

ಮೆಣಸ್ಕಾಯಿ

ಬೇಕಾಗುವ ಸಾಮಾಗ್ರಿಗಳು: -


ತರಕಾರಿ :-
ಅನನಾಸು ಅಥವಾ ಅಂಬಟೆಕಾಯಿ ಅಥವಾ ಮಾವಿನಕಾಯಿ

ತೆಂಗಿನ ಕಾಯಿ - 1 ಕಡಿ
ಒಣಮೆಣಸು - 4
ಉದ್ದಿನಬೇಳೆ     - 4 ಚಮಚ
ಕಪ್ಪುಎಳ್ಳು - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ದೊಡ್ಡ ಲಿಂಬೆ ಗಾತ್ರದಷ್ಟು


ಒಗ್ಗರಣೆಗೆ:- ಸಾಸಿವೆ, ಮೆಣಸು, ಉದ್ದಿನಬೇಳೆ, ಎಣ್ಣೆ, ಕರಿಬೇವುಸೊಪ್ಪು

ಮಾಡುವ ವಿಧಾನ: -
ಅನನಾಸು (ಪೈನಾಪಲ್), ಅಂಬಟೆಕಾಯಿ ಅಥವಾ ಮಾವಿನಕಾಯಿ ಈ ಮೂರರಲ್ಲಿ ಯಾವುದಾದರೊಂದು ತರಕಾರಿಯನ್ನು ಹೋಳುಗಳಾಗಿ ಹಚ್ಚಿ ಇಡಿ.  ಒಣಮೆಣಸು, ಉದ್ದಿನಬೇಳೆ ಮತ್ತು ಕಪ್ಪುಎಳ್ಳು ಇವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ತರಕಾರಿಯನ್ನು ನೀರು, ಉಪ್ಪು ಬೆಲ್ಲ ಹಾಕಿ ಬೇಯಿಸಿ. ಇದು ಬೆಂದ ನಂತರ ರುಬ್ಬಿಟ್ಟ ಮಸಾಲೆಯನ್ನು ಬೆರೆಸಿ ಕುದಿಸಿರಿ. ನಂತರ ಕರಿಬೇವು ಸೊಪ್ಪು ಹಾಕಿ ಮುಚ್ಚಿ ಒಲೆಯಿಂದ ಕೆಳಗಿರಿಸಿ. ನಂತರ 4 ಚಮಚ ಎಣ್ಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ ಮೇಣಸ್ಕಾಯಿಗೆ ಒಗ್ಗರಣೆ ಕೊಡಿ. ರುಚಿಯಾದ ಮೆಣಸ್ಕಾಯಿ ರೆಡಿ. ಇದನ್ನು ದೋಸೆ, ಇಡ್ಲಿ ಅಥವಾ ಅನ್ನದ ಜೊತೆ ಸವಿಯಬಹುದು. 
ಮಾವಿನಕಾಯಿ ಅಥವಾ ಅಂಬಟೆ ಕಾಯಿ ಮೆಣಸ್ಕಾಯಿಯಾದರೆ ಬೆಲ್ಲ ಸ್ವಲ್ಪ ಜಾಸ್ತಿ ಬೇಕಾಗುತ್ತದೆ. ಇದು ಹುಳಿಯಾಗಿರುವುದರಿಂದ ಕೊಟ್ಟಿರುವ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು ಬೆಲ್ಲ ಬೆರೆಸಿ. ಇದು ಹುಳಿಸಿಹಿಯಾಗಿ ತಿನ್ನಲು ರುಚಿಯಾಗಿತ್ತದೆ. 

ನಿಮ್ಮ ಸ್ನೇಹಿತರಿಗೂ ತಿಳಿಸಿ, ನೀವೂ ಮಾಡಿ ನೋಡಿ

Friday, 20 January 2017

ಉದ್ದಿನೆಟ್ಟು (ಉದ್ದಿನ ಹಿಟ್ಟು)

ಬೇಕಾಗುವ ಸಾಮಾಗ್ರಿಗಳು: - 
ಉದ್ದಿನ ಬೇಳೆ - 1 ಲೋಟ
ಮೊಸರು ಯಾ ಮಜ್ಜಿಗೆ         - 2 ಲೋಟ
ಹಸಿಮೆಣಸು - 4
ಹಸಿಶುಂಠಿ - ಸಣ್ಣ ತುಂಡು
ಇಂಗು - ಹುಣಿಸೆ ಬೀಜದಷ್ಟು
ಉಪ್ಪು - ರುಚಿಗೆ ಬೇಕಷ್ಟು 

ಮಾಡುವ ವಿಧಾನ: - 1 
ಉದ್ದಿನ ಬೇಳೆಯನ್ನು ತೊಳೆದು 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ನಂತರ ಇದನ್ನು ಮಜ್ಜಿಗೆ ಅಥವಾ ಮೊಸರು ಹಾಕಿ ರುಬ್ಬಿ ಹಿಟ್ಟು ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ. ಹಸಿಮೆಣಸು, ಶುಂಠಿಗಳನ್ನು ಸಣ್ಣಗೆ ಹೆಚ್ಚಿ ಈ ಹಿಟ್ಟಿಗೆ ಮಿಶ್ರ ಮಾಡಿ. ಇಂಗು ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಗ್ಗರಣೆ ಕೊಡಿ. ಒಗ್ಗರಣೆಗೆ ಸಾಸಿವೆ, ಮೆಣಸು ಮತ್ತು ಕರಿವೇವಿನ ಸೊಪ್ಪನ್ನು ಹಾಕಿ. ಒಗ್ಗರಣೆಯಾದ ಬಳಿಕ ಮುಚ್ಚಿಡಿ. ಊಟದಲ್ಲಿ ಇದನ್ನು ಸೆಂಡಿಗೆ ಮೆಣಸು (ಮಜ್ಜಿಗೆ ಮೆಣಸು) ಇದರೊಂದಿಗೆ ತಿನ್ನಲು ಬಲುರುಚಿ. 

ಮಾಡುವ ವಿಧಾನ: - 2
ಉದ್ದಿನ ಬೇಳೆಯನ್ನು ಮಿಕ್ಸಿಗೆ ಹಾಕಿ ಪುಡಿಮಾಡಿ. ಈ ಪುಡಿಗೆ ಹಸಿಮೆಣಸು, ಶುಂಠಿ, ಉಪ್ಪು, ಇಂಗು ನೀರು ಹಾಕಿ ಮಜ್ಜಿಗೆ ಅಥವಾ ಮೊಸರು ಬೆರೆಸಿ ಕಲಸಿ ಒಗ್ಗರಣೆ ಕೊಡಿ. ಇನ್ನೊಂದು ವಿಧಾನದ ಉದ್ದಿನೆಟ್ಟು ರೆಡಿ. 

ಮಾಡುವ ವಿಧಾನ: - 3
ಉದ್ದಿನ ಬೇಳೆಯನ್ನು ಹುರಿದು ಪೌಡರ್ ಮಾಡಿ. ಈ ಪುಡಿಗೆ ಹಸಿಮೆಣಸು, ಶುಂಠಿ, ಉಪ್ಪು, ಇಂಗು ನೀರು ಹಾಕಿ ಮಜ್ಜಿಗೆ ಅಥವಾ ಮೊಸರು ಬೆರೆಸಿ ಕಲಸಿ ಒಗ್ಗರಣೆ ಕೊಡಿ. ಇನ್ನೊಂದು ವಿಧಾನದ ಉದ್ದಿನೆಟ್ಟು ರೆಡಿ. 

Thursday, 19 January 2017

ಸೌತೆ ಮತ್ತು ಕೆಸುವಿನ ಎಲೆ ಸಾಂಬಾರು

ಬೇಕಾಗುವ ಸಾಮಾಗ್ರಿಗಳು: - 
ಸೌತೆಕಾಯಿ - 1
ಕೆಸುವಿನ ಎಲೆ - 10
ಇಡಿ ಹೆಸರು - 100 ಗ್ರಾಂ
ಒಣ ಮೆಣಸು - 6
ಕೊತ್ತಂಬರಿ - 2 ಚಮಚ
ಉದ್ದಿನ ಬೇಳೆ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ - 1/2

ಮಾಡುವ ವಿಧಾನ : -
ಮೊದಲನೇ ದಿನ ಹೆಸರುಕಾಳನ್ನು ನೆನೆಯಿಸಿ ಮೊಳಕೆ ಬರಿಸಿಟ್ಟುಕೊಳ್ಳಬೇಕು. ಸೌತೆಕಾಯಿಯನ್ನು ಹೆಚ್ಚಿ ಮೊಳಕೆ ಬರಿಸಿದ ಹೆಸರು ಕಾಳಿನೊಂದಿಗೆ ಬೇಯಲು ಇಡಿ ಅದಕ್ಕೆ ಉಪ್ಪು. ಹುಳಿ ನೀರು. ಒಂದು ಸಣ್ಣ ತುಂಡು ಬೆಲ್ಲ ಹಾಗೂ ಅರಶಿನ ಹಾಕಿ ಬೇಯಿಸಿ ಇದರೊಂದಿಗೆ ಹೆಚ್ಚಿದ ಕೆಸುವಿನ ಎಲೆ ಹಾಕಿ ಬೇಯಿಸಿ. ಒಣಮೆಣಸು, ಉದ್ದಿನ ಬೇಳೆ ಮತ್ತು ಕೊತ್ತಂಬರಿಯನ್ನು ಎಣ್ಣೆಯಲ್ಲಿ ಹುರಿದು ತೆಂಗಿನ ಕಾಯಿ ಜೊತೆ ರುಬ್ಬಿಕೊಳ್ಳಿ. ಹೋಳು ಬೆಂದ ನಂತರ ಈ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಕುದಿಸಿರಿ. ಇದಕ್ಕೆ ಇಂಗುನೀರು ಹಾಕಿ ಮತ್ತು ಕರಿಬೇವು ಸೊಪ್ಪು ಹಾಕಿ ಕೊನೆಯಲ್ಲಿ ಸಾಸಿವೆ ಮೆಣಸು ಒಗ್ಗರಣೆ ಹಾಕಿ ಮುಚ್ಚಿಡಿ ಇದಕ್ಕೆ ಹಲಸಿನ ಬೀಜ ಹಾಕಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.  

ಸ್ನೇಹಿತರೊಂದಿಗೆ ಶೇರ್ ಮಾಡಿ.

Wednesday, 18 January 2017

ಮಸಾಲೆ ಕಡ್ಲೆ

ಬೇಕಾಗುವ ಸಾಮಾಗ್ರಿಗಳು: - 
ಹಸಿನೆಲಕಡಲೆ - ¼ ಕೆಜಿ
ಈರುಳ್ಳಿ - 1
ಕ್ಯಾರೆಟ್ - 1
ಟೊಮೇಟೊ - 1
ಕೊತ್ತಂಬರಿಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ ಬೇಕಷ್ಟು
ಮೆಣಸಿನ ಹುಡಿ - 1 ಚಮಚ
ಕೊಬ್ಬರಿ ಎಣ್ಣೆ - 1 ಚಮಚ

ಮಾಡುವ ವಿಧಾನ: -
ಹಸಿನೆಲಗಡಲೆಯನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ (ಕುಕ್ಕರಿನಲ್ಲಿ ಹಾಕಿಯೂ ಬೇಯಿಸಬಹುದು). ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೇಟೊಗಳನ್ನು ಸಣ್ಣಗೆ ಹಚ್ಚಿ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಕ್ಯಾರೆಟನ್ನು ತುರಿದು ಇದೇ ಪಾತ್ರೆಗೆ ಹಾಕಿ. ಇದಕ್ಕೆ ಉಪ್ಪು, ಕೊಬ್ಬರಿ  ಎಣ್ಣೆ ಮತ್ತು ಮೆಣಸಿನ ಹುಡಿ ಎಲ್ಲವನ್ನು ಹಾಕಿ ಮಿಶ್ರಮಾಡಿ. ಈ ಮಿಶ್ರಣಕ್ಕೆ ಬೇಯಿಸಿಟ್ಟ ನೆಲಕಡಲೆಯನ್ನು ಹಾಕಿ ಮಿಕ್ಸ್ ಮಾಡಿ ತಿನ್ನಲು ಕೊಡಿ. ಖಾರ ಇಷ್ಟ ಪಡುವವರು ಮೆಣಸಿನ ಹುಡಿಯ ಪ್ರಮಾಣವನ್ನು ಹೆಚ್ಚಿಗೆ ಮಾಡಬಹುದು ಮತ್ತು ಸಿಹಿ ಇಷ್ಟ ಪಡುವವರು ಒಂದು ಚಮಚ ಸಕ್ಕರೆಯನ್ನು ಹಾಕಬಹುದು. ಸಂಜೆ ಕಾಫಿಯೊಂದಿಗೆ ಸವಿಯಲು ಕೊಡಿ. 
ನಿಮ್ಮವರೊಂದಿಗೆ ಶೇರ್ ಮಾಡಿ.  

Tuesday, 17 January 2017

ಕ್ಯಾರೆಟ್ ಹಲ್ವ

ಬೇಕಾಗುವ ಸಾಮಾಗ್ರಿಗಳು: - 

ಕ್ಯಾರೆಟ್         - ¼ ಕೆಜಿ
ಸಕ್ಕರೆ - ¼ ಕೆಜಿ
ತುಪ್ಪ - 1 ಲೋಟ
ಗೋಡಂಬಿ - 100 ಗ್ರಾಂ
ಏಲಕ್ಕಿ - 4
ಹಾಲು - 1 ಲೋಟ


ಮಾಡುವ ವಿಧಾನ : -
ಕ್ಯಾರೆಟನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ. ಬಾಣಲೆಯಲ್ಲಿ 4 ಚಮಚ ತುಪ್ಪಹಾಕಿ ಇದರಲ್ಲಿ ಕ್ಯಾರೆಟ್ ತುರಿಯನ್ನು ಹಾಕಿ ಹುರಿಯಿರಿ. ಕ್ಯಾರೆಟಿನ ಹಸಿ ವಾಸನೆ ಹೊಗುವ ತನಕ ಹುರಿದು ನಂತರ ಇದಕ್ಕೆ ಹಾಲು ಹಾಕಿ ಬೇಯಿಸಿ. ಈಗ ಸಕ್ಕರೆ ಹಾಕಿ ಮಗುಚುತ್ತಾ ಇರಿ. ಇದರ ದ್ರವ ಅಂಶ ಕಡಿಮೆಯಾದಾಗ ತುಪ್ಪ ಹಾಕಿ ಮಗುಚಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಗೋಡಂಬಿಯನ್ನು ಹಾಕಿ ವಿಶ್ರಮಾಡಿ. ರುಚಿಯಾದ ಕ್ಯಾರೆಟ್ ಹಲ್ವ ರೆಡಿ. 
ಗೋಡಂಬಿಯನ್ನು ಹುರಿದು ಹಾಕಿದರೆ ತುಂಬಾ ರುಚಿಯಾಗಿರುತ್ತದೆ. ತುಂಬಾ ಸರಳ ವಿಧಾನದಲ್ಲಿ ತಯಾರಿಸಬಹುದಾದ ಕ್ಯಾರೆಟ್ ಹಲ್ವ ನೀವು ಮಾಡಿನೋಡಿ. ನಿಮ್ಮವರಿಗೂ ತಿಳಿಸಿ.

Monday, 16 January 2017

ಚಟ್ಟಂಬಡೆ

ಬೇಕಾಗುವ ಸಾಮಾಗ್ರಿಗಳು : -
ಉದ್ದಿನ ಬೇಳೆ - 1 ಲೋಟ
ಕಡ್ಲೆ ಬೇಳೆ - 1 ಲೋಟ
ಇಂಗು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸು - 4
ಶುಂಠಿ - ಸಣ್ಣತುಂಡು
ಕರಿಬೇವುಸೊಪ್ಪು -  4 ಎಸಳು
ಕರಿಯಲು ಎಣ್ಣೆ - 1/2 ಲೀಟರ್


ಮಾಡುವ ವಿಧಾನ: -
ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಒಟ್ಟುಮಾಡಿ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನೆನೆದ ಈ ಬೆಳೆಯನ್ನು ನೀರು ಇಲ್ಲದಂತೆ ಮಿಕ್ಸಿಗೆ ಹಾಕಿ ಉಪ್ಪು, ಇಂಗುನೀರು ಹಾಕಿ ತರಿತರಿಯಾಗಿ ರುಬ್ಬಿ. ಈ ರುಬ್ಬಿದ ಹಿಟ್ಟಿಗೆ ಹಸಿಮೆಣಸು, ಶುಂಠಿ, ಕರಿಬೇವುಸೊಪ್ಪುಗಳನ್ನು ಸಣ್ಣಗೆ ಹಚ್ಚಿಹಾಕಿ ಮಿಶ್ರಣ ಮಾಡಿ. ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾದ ನಂತರ ರುಬ್ಬಿಟ್ಟ ಹಿಟ್ಟನ್ನು ಸಣ್ಣಸಣ್ಣ ಉಂಡೆಗಳಾಗಿ ಮಾಡಿ ಸ್ವಲ್ಪ ತಟ್ಟಿ ಚಟ್ಟೆಯಾಕಾರವಾಗುವಂತೆ ಮಾಡಿ ಎಣ್ಣೆಯಲ್ಲಿ ಹಾಕಿ ಕಾಯಿಸಿ. ಬಂಗಾರದ ಬಣ್ಣ ಬರುವವರೆಗೆ ಕಾಯಿಸಿ ಎಣ್ಣೆಯಿಂದ ತೆಗೆದು ಇರಿಸಿ. ಇದನ್ನು ತೆಂಗಿನಕಾಯಿಯ ಖಾರ ಚಟ್ನಿಯೊಂದಿಗೆ ಸವಿಯಲು ಕೊಡಿ.

Sunday, 15 January 2017

ಪುನರಪುಳಿ(ಕೋಕಂ) ಸಾರು

ಬೇಕಾಗುವ ಸಾಮಾಗ್ರಿಗಳು : -
ಪುನರಪುಳಿ    - 8
ಬೆಲ್ಲ - 100 ಗ್ರಾಂ
ಉಪ್ಪು - ರುಚಿಗೆ ಬೇಕಷ್ಟು
ಬೆಳ್ಳುಳ್ಳಿ - 10 ಎಸಳು
ಸಾರಿನ ಹುಡಿ - 2 ಚಮಚ
ಅರಶಿನ - ಸ್ವಲ್ಪ

ಮಾಡುವ ವಿಧಾನ:-
ಒಂದು ಪಾತ್ರೆಯಲ್ಲಿ ಪುನರಪುಳಿಯನ್ನು 4 ಲೋಟ ನೀರು ಹಾಕಿ ಬೇಯಲು ಇಡಿ. ಇದಕ್ಕೆ ಉಪ್ಪು, ಬೆಲ್ಲ ಅರಶಿನಹುಡಿ ಹಾಕಿ ಕುದಿಸಿ. ನಂತರ ಸಾರಿನ ಹುಡಿ ಹಾಕಿ ಸ್ವಲ್ಪ ಕುದಿ ಬಂದ ನಂತರ ಕೊನೆಯಲ್ಲಿ ಕರಿಬೇವು ಸೊಪ್ಪು ಹಾಕಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಒಗ್ಗರಣೆ ಸೌಟಿನಲ್ಲಿ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಜಜ್ಜಿ ಹಾಕಿ ಎಣ್ಣೆಯೊಂದಿಗೆ ಕರಿಯಿರಿ. ಇದು ಕಾಯುತ್ತಾ ಬಂದಾಗ ಸಾಸಿವೆ ಮೆಣಸು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಸಾರಿಗೆ ಹಾಕಿ ಮುಚ್ಚಿಡಿ. ರುಚಿಯಾದ ಸಾರು ರೆಡಿ. ಇದು ಆರೋಗ್ಯಕ್ಕೂ ಉತ್ತಮ.

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

Saturday, 14 January 2017

ಅಕ್ಕಿ ಶ್ಯಾವಿಗೆ ಮತ್ತು ಶ್ಯಾವಿಗೆ ಚಿತ್ರಾನ್ನ

ಶ್ಯಾವಿಗೆಗೆ ಬೇಕಾಗುವ ಸಾಮಾಗ್ರಿಗಳು: - 


ಬೆಳ್ತಿಗೆ ಅಕ್ಕಿ - 1 ಪಾವು
ತೆಂಗಿನ ಕಾಯಿ - 1 ಕಡಿ
ಉಪ್ಪು - ರುಚಿಗೆ ಬೇಕಷ್ಟು

ಶ್ಯಾವಿಗೆ ಮಾಡುವ ವಿಧಾನ : -
ಬೆಳ್ತಿಗೆ ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ಈ ಅಕ್ಕಿಗೆ ತೆಂಗಿನ ಕಾಯಿ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನ ಹದದಷ್ಟು ನಿರಾಗಿರಲಿ. ನಂತರ ಬಾಣಲೆಯಲ್ಲಿ ಈ ಹಿಟ್ಟನ್ನು ಹಾಕಿ ಒಲೆಯಮೇಲೆ ಸಣ್ಣ ಉರಿಯಲ್ಲಿ ಮಗುಚುತ್ತಾ ಇರಿ. ಹಿಟ್ಟು ದಪ್ಪಗಾಗುತ್ತಾ ಬರುತ್ತದೆ. ಈ ಹಿಟ್ಟನ್ನು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗುವ ತನಕ ಮಗುಚುತ್ತಾ ಇರಿ. ನಂತರ ಈ ಹಿಟ್ಟನ್ನು ಉಂಡೆಗಳಾಗಿ ಮಾಡಿ ಇಡ್ಲಿ ಬೇಯಿಸಿದಂತೆ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. 10 ನಿಮಿಷಗಳ ಬಳಿಕ ಒಂದೊಂದೇ ಉಂಡೆಗಳನ್ನು ಶ್ಯಾವಿಗೆ ಒತ್ತುವ ಮೆಶಿನ್‍ನಲ್ಲಿ ಹಾಕಿ ತಿರುಗಿಸಿ. ಶ್ಯಾವಿಗೆ ಮೆಶಿನ್‍ನ ಕೆಳಭಾಗದಲ್ಲಿ ತಟ್ಟೆಯನ್ನು ಹಿಡಿಯಿರಿ. ಈಗ ಅಕ್ಕಿ ಶ್ಯಾವಿಗೆ ರೆಡಿ. ಇದನ್ನು ಸಾಂಬಾರು ಅಥವಾ ರಸಾಯನ ಬೆರೆಸಿ ತಿನ್ನಲು ಕೊಡಿ.


ಶ್ಯಾವಿಗೆ ಚಿತ್ರಾನ್ನಕ್ಕೆ ಬೇಕಾಗುವ ಸಾಮಾಗ್ರಿಗಳು: -


ತೆಂಗಿನ ತುರಿ  - 1ಕಪ್
ಸಾಸಿವೆ  - 1 ಚಮಚ
ಒಣಮೆಣಸು - 4
ಕರಿಬೇವುಸೊಪ್ಪು - 2 ಎಸಳು
ಎಣ್ಣೆ - 4 ಚಮಚ

ಅಕ್ಕಿ ಶ್ಯಾವಿಗೆಯ ಚಿತ್ರಾನ್ನ ಮಾಡುವ ವಿಧಾನ : -
ಮೇಲೆ ತಯಾರಿಸಿದ ಅಕ್ಕಿ ಶ್ಯಾವಿಗೆಯನ್ನು ಬಿಡಿಬಿಡಿಯಾಗುವಂತೆ ಪುಡಿ ಮಾಡಿ ಇಟ್ಟುಕೊಳ್ಳಿ. ತೆಂಗಿನ ತುರಿ, ಸಾಸಿವೆ ಮತ್ತು ಒಣಮೆಣಸನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೇ ರುಬ್ಬಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿಯುವಾಗ ಉಪ್ಪು, ಲಿಂಬೆರಸ, 2 ಚಮಚ ಸಕ್ಕರೆ ಮತ್ತು ಅರಶಿನದ ಪುಡಿ ಬೆರೆಸಿ ನಂತರ ಪುಡಿ ಮಾಡಿದ ಶ್ಯಾವಿಗೆಯನ್ನು ಹಾಕಿ ಮಗುಚಿರಿ. ಕೊನೆಯಲ್ಲಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಮಗುಚಿರಿ. ಈಗ ಚಿತ್ರಾನ್ನ ಸವಿಯಲು ರೆಡಿ. 



Friday, 13 January 2017

ಲಿಂಬೆಹಣ್ಣು ದಿಡೀರ್ ಸಾರು


ಬೇಕಾಗುವ ಸಾಮಾಗ್ರಿಗಳು:- 
ಲಿಂಬೆಹಣ್ಣು   - 1
ಹಸಿಮೆಣಸು - 4
ಬೆಲ್ಲ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವು ಸೊಪ್ಪು - 2 ಎಸಳು
ಇಂಗು  - ಸ್ವಲ್ಪ
ಅರಶಿನದ ಹುಡಿ        - ಸ್ವಲ್ಪ



ಮಾಡುವ ವಿಧಾನ : -
ಲಿಂಬೆಹಣ್ಣಿನ ರಸ ತೆಗೆದು ಒಂದು ಪಾತ್ರೆಗೆ ಹಾಕಿ 4 ಲೋಟ ನೀರು ಹಾಕಿ. ಉಪ್ಪು, ಬೆಲ್ಲ ಮತ್ತು ಅರಶಿನದ ಪುಡಿ ಹಾಕಿ ಒಲೆಯಮೇಲೆ ಕುದಿಯಲು ಇಡಿ. ಹಸಿಮೆಣಸನ್ನು ಸೀಳು ಮಾಡಿ ಹಾಕಿ ಕುದಿಸಿ. ನಂತರ ಇಂಗು ನೀರು ಮತ್ತು ಕರಿಬೇವುಸೊಪ್ಪು ಹಾಕಿ ಕುದಿಸಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಎಣ್ಣೆ, ಜೀರಿಗೆ, ಒಣಮೆಣಸು ಕರಿಬೇವುಸೊಪ್ಪು, ಇಂಗು ಹಾಕಿ ಒಗ್ಗರಣೆ ತಯಾರಿಸಿ ಈ ಸಾರಿಗೆ ಹಾಕಿ ಮುಚ್ಚಿಡಿ. ಈಗ ದಿಡೀರ್ ಸಾರು ಬಳಸಲು ಸಿದ್ಧ. ಹುಳಿ ಹೆಚ್ಚೆನಿಸಿದರೆ ಸಲ್ಪ ಬೆಲ್ಲದ ಪ್ರಮಾಣವನ್ನು ಜಾಸ್ತಿ ಮಾಡಿ.

Thursday, 12 January 2017

ಕಟ್ ಸಾರು

ಬೇಕಾಗುವ ಸಾಮಾಗ್ರಿಗಳು: -
ತೊಗರಿಬೇಳೆ - 4 ಹಿಡಿ
ಟೊಮೇಟೊ             - 2
ಹಸಿಮೆಣಸು          - 4
ಶುಂಠಿ - ಸಣ್ಣ ತುಂಡು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕರಿಬೇವು ಸೊಪ್ಪು - 2 ಎಸಳು
ಇಂಗು - ಸ್ವಲ್ಪ
ಲಿಂಬೆ ಹಣ್ಣು - 1
ಬೆಲ್ಲ - ಸಣ್ಣ ತುಂಡು


ಮಾಡುವ ವಿಧಾನ : - 

ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ ಬೇಕಷ್ಟು ನೀರು ಹಾಕಿ ಉಪ್ಪು, ಬೆಲ್ಲ, ಅರಶಿನ ಹುಡಿ ಹಾಕಿ ಕುದಿಸಿರಿ. ಟೊಮೇಟೊವನ್ನು ಸಣ್ಣಗೆ ಹಚ್ಚಿ ಹಾಕಿ. ಟೊಮೇಟೊ ಬೆಂದ ನಂತರ ಹಸಿಮೆಣಸು ಮತ್ತು ಶುಂಠಿಯನ್ನು ಹಚ್ಚಿ ಹಾಕಿ ಕುದಿ ಬರಿಸಿ. ನಂತರ ಕರಿಬೇವು ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಇಂಗು ನೀರನ್ನು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆರಸವನ್ನು ಹಾಕಿ ಕೆಳಗಿರಿಸಿ ಮುಚ್ಚಿ ಇಡಿ. ಈಗ ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು ಸೊಪ್ಪು ಮತ್ತು ಸ್ವಲ್ಪ ಇಂಗು ಹಾಕಿ ಒಗ್ಗರಣೆ ಕೊಡಿ. ಘಮಘಮಿಸುವ ರುಚಿಯಾದ ಸಾರು ರೆಡಿ. 


ನೀವೂ ಮಾಡಿ ನೋಡಿ. ನಿಮ್ಮವರೊಂದಿಗೆ ಶೇರ್ ಮಾಡಿ.  


Wednesday, 11 January 2017

ಟೊಮೇಟೊ ಸಾರು



ಸಾರಿನ ಹುಡಿ : -
ಬೇಕಾಗುವ ಸಾಮಾಗ್ರಿಗಳು : - 
ಒಣ ಮೆಣಸು - 100 ಗ್ರಾಂ
ಕೊತ್ತಂಬರಿ - 50 ಗ್ರಾಂ
ಜೀರಿಗೆ - 25 ಗ್ರಾಂ
ಮೆಂತೆ - 1 ಚಮಚ
ಕರಿಬೇವುಸೊಪ್ಪು - 10 ಎಸಳು
ಇಂಗು - ಸ್ವಲ್ಪ
ಕೊಬ್ಬರಿ ಎಣ್ಣೆ - 5 ಚಮಚ

ಸಾರಿನ ಹುಡಿ ತಯಾರಿಸುವ ವಿಧಾನ: -
ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಕೊಬ್ಬರಿ ಎಣ್ಣೆ ಹಾಕಿ ಒಣಮೆಣಸನ್ನು ಕರಿಯಿರಿ. ಕರಿದ ಒಣಮೆಣಸನ್ನು ಒಂದು ತಟ್ಟೆಗೆ ಹಾಕಿಡಿ. ನಂತರ ಕೊತ್ತಂಬರಿಯನ್ನು ಕರಿಯಿರಿ ಹೀಗೆ ಮೇಲೆ ತಿಳಿಸಿದ ಪ್ರತಿ ಸಾಮಾಗ್ರಿಗಳನ್ನು ಒಂದೊಂದಾಗಿ ಕರಿದು ಒಂದೇ ತಟ್ಟೆಯಲ್ಲಿ ಹಾಕಿ ಇಡಿ. ಇದು ತಣಿದ ಬಳಿಕ ಎಲ್ಲವನ್ನೂ ಒಟ್ಟಗಿ ಮಿಕ್ಸಿಗೆ ಹಾಕಿ ಪುಡಿಮಾಡಿ. ಈಗ ಸಾರಿನ ಹುಡಿ ಬಳಸಲು ಸಿದ್ಧವಾಗಿದೆ. ಕರಿಬೇವುಸೊಪ್ಪು ಮತ್ತು ಇಂಗು ಇವೆರಡನ್ನೂ ಹಾಕದೆ ಇದ್ದರೂ ಸಾರಿನಪುಡಿಯಾಗುತ್ತದೆ. ಆದರೆ ಕರಿಬೇವುಸೊಪ್ಪು ಮತ್ತು ಇಂಗು ಇವೆರಡನ್ನೂ ಕರಿದು ಇದರೊಂದಿಗೆ ಬಳಸುವುದರಿಂದ ಸಾರು ವಿಶಿಷ್ಟ ಪರಿಮಳ ಹಾಗೂ ರುಚಿಯಾಗುತ್ತದೆ. 

ಸಾರು ಮಾಡುವ ವಿಧಾನ: - 
4 ಟೊಮೇಟೊವನ್ನು ಚೆನ್ನಾಗಿ ಬೇಯಿಸಿ ತಣಿಸಿ ಮಿಕ್ಸಿಗೆ ಹಾಕಿ ರುಬ್ಬಿ ಸಾಧಾರಣ ದಪ್ಪವಿರುವಂತೆ ನೀರು ಮಾಡಿ ಒಲೆಯ ಮೇಲಿಟ್ಟು ಕುದಿಯಲು ಬಿಡಿ. ಈಗ ಈ ರಸಕ್ಕೆ ರುಚಿಗೆ ಬೇಕಷ್ಟು ಉಪ್ಪು, ಸ್ವಲ್ಪ ಬೆಲ್ಲ, ಸ್ವಲ್ಪ ಅರಶಿನ ಹುಡಿ, ಸ್ವಲ್ಪ ಲಿಂಬೆಹಣ್ಣಿನ ರಸ ಹಾಕಿ ಕುದಿಸಿ. ಇದು ಕುದಿ ಬಂದ ನಂತರ ಮೊದಲೇ ತಯಾರಿಸಿಟ್ಟ ಸಾರಿನ ಹುಡಿಯಲ್ಲಿ 4 ಚಮಚ ಸಾರಿನ ಹುಡಿಯನ್ನು ಹಾಕಿ ಕುದಿಸಿ. ನಂತರ ಸ್ವಲ್ಪ ಇಂಗು ನೀರು, ಕರಿಬೇವು ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ ಒಲೆಯ ಮೇಲಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಒಗ್ಗರಣೆಗೆ ಸಾಸಿವೆ, ಒಣಮೆಣಸು, ಕರಿಬೇವು ಸೊಪ್ಪು ಮತ್ತು ಸ್ವಲ್ಪ ಇಂಗು, ಎಣ್ಣೆ ಹಾಕಿ ಒಗ್ಗರಣೆ ಮಾಡಿ ಸಾರಿಗೆ ಬೆರೆಸಿ ಮುಚ್ಚಿಡಿ. 

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ

Tuesday, 10 January 2017

ಉದ್ದಿನ ವಡೆ

ಬೇಕಾಗುವ ಸಾಮಾಗ್ರಿಗಳು: - 
ಉದ್ದಿನ ಬೇಳೆ    - 1 ಲೋಟ
ಹಸಿಮೆಣಸು - 4
ಶುಂಠಿ - ಸಣ್ಣ ತುಂಡು
ಕರಿಬೇವುಸೊಪ್ಪು    - 2 ಎಸಳು
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ (ಕರಿಯಲು) - 1/2 ಲೀಟರ್
ಇಂಗು ನೀರು - ಸ್ವಲ್ಪ


ಮಾಡುವ ವಿಧಾನ : -
ಉದ್ದಿನ ಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ತೊಳೆದು ಸಂಪೂರ್ಣ ನೀರನ್ನು ಚೆಲ್ಲಿ ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿ. ಇಂಗು ನೀರನ್ನು ಸೇರಿಸಿ ರುಬ್ಬಿ. ನಂತರ ಉಪ್ಪು ಹಾಕಿ ಪುನಃ ರುಬ್ಬಿ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಇಡಿ. ನಂತರ ಹಸಿಮೆಣಸು, ಶುಂಠಿ, ಕರಿಬೇವುಸೊಪ್ಪು ಇವೆಲ್ಲವನ್ನು ಸಣ್ಣದಾಗಿ ಹೆಚ್ಚಿ ಈ ಹಿಟ್ಟಿಗೆ ಸೇರಿಸಿ ಸರಿಯಾಗಿ ಮಿಶ್ರವಾಗುವಂತೆ ಕಲಸಿ.  ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾದ ನಂತರ ಈ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಕೈಯಲ್ಲಿ ತೆಗೆದು ಗೋಲಿಯಾಕಾರದಲ್ಲಿ ಎಣ್ಣೆಯಲ್ಲಿ ಬಿಟ್ಟು ಮಗುಚುತ್ತಾ ಇರಿ.  ಸರಿಯಾಗಿ ಕಾದ ನಂತರ ತೆಗೆದಿಡಿ. ಇದು ಬಿಸಿ ಇರುವಾಗಲೇ ಚಟ್ನಿಯೊಂದಿಗೆ ತಿನ್ನಲು ಬಲುರುಚಿ. 

ನಿಮ್ಮ ಸ್ನೇಹಿತರು ಮತ್ತು ಬಳಗದವರೊಂದಿಗೆ ಶೇರ್ ಮಾಡಿ. 
ಕಮೇಂಟ್ಸ್ ಹಾಕಿ ಸಲಹೆ - ಸೂಚನೆಗಳನ್ನು ಕೊಡಿ.

Monday, 9 January 2017

ಚಿತ್ರಾನ್ನ

ಬೇಕಾಗುವ ಸಾಮಾಗ್ರಿಗಳು : -
ಬೆಳ್ತಿಗೆ ಅಕ್ಕಿ   - 1 ಲೋಟ
ತೆಂಗಿನ ಕಾಯಿತುರಿ - 1 ಕಪ್
ಸಾಸಿವೆ   - 1 ಚಮಚ
ಒಣಮೆಣಸು - 4
ಉಪ್ಪು   - ರುಚಿಗೆ ತಕ್ಕಷ್ಟು
ಹುಣಿಸೆಹುಳಿ ನೀರು - ಸ್ವಲ್ಪ
ಬೆಲ್ಲ   - ಸಣ್ಣ ತುಂಡು
ಅರಶಿನ ಹುಡಿ   - ಸ್ವಲ್ಪ
ಎಣ್ಣೆ     - 2 ಚಮಚ 
ಕರಿಬೇವು ಸೊಪ್ಪು - 2 ಎಸಳು


ಮಾಡುವ ವಿಧಾನ : - 1
ಅಕ್ಕಿಯಿಂದ ಬಿಡಿಬಿಡಿಯಾದ ಅನ್ನ ತಯಾರಿಸಿಕೊಳ್ಳಿ. ತೆಂಗಿನಕಾಯಿ ತುರಿ, ಸಾಸಿವೆ ಮತ್ತು ಒಣಮೆಣಸನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. ಬಾಣಾಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಮೆಣಸು, ಕರಿಬೇವುಸೊಪ್ಪು, ಅರಶಿನ ಹುಡಿ ಇವೆಲ್ಲವನ್ನು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿದ ನಂತರ ಅದಕ್ಕೆ ರೆಡಿಮಾಡಿಟ್ಟ ಅನ್ನವನ್ನು ಹಾಕಿ ಮಗುಚಿ. ನಂತರ ಉಪ್ಪು, ಹುಣಿಸೆಹುಳಿ ನೀರು ಸ್ವಲ್ಪ ಬೆಲ್ಲ ಮತ್ತು ತೆಂಗಿನಕಾಯಿಯ ರುಬ್ಬಿಟ್ಟ ಮಸಾಲೆಯನ್ನು ಬೆರೆಸಿ ಚೆನ್ನಾಗಿ ಮಗುಚಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ರುಚಿಯಾದ ಚಿತ್ರಾನ್ನ ರೆಡಿ. ಒಗ್ಗರಣೆಗೆ ನೆಲಕಡಲೆಯನ್ನೂ ಹಾಕಬಹುದು. 

ಮಾಡುವ ವಿಧಾನ : - 2
ಬಾಣಲೆಯಲ್ಲಿ ಎಣ್ಣೆಹಾಕಿ ಸಾಸಿವೆ, ಮೆಣಸು, ಕರಿಬೇವುಸೊಪ್ಪು, ಅರಶಿನ ಹುಡಿ ಹಾಕಿ ಒಗ್ಗರಣೆ ತಯಾರಿಸಿ. ನಂತರ ಈರುಳ್ಳಿ ಮತ್ತು ಹಸಿಮೆಣಸನ್ನು ಸಣ್ಣಗೆ ಹಚ್ಚಿ ಹಾಕಿ ಮಗುಚಿರಿ. ಈರುಳ್ಳಿ ಬೆಂದ ನಂತರ ಅನ್ನವನ್ನು ಹಾಕಿ ಮಿಶ್ರ ಮಾಡಿ. ಇದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. 2 ಚಮಚದಷ್ಟು ಲಿಂಬೆಹಣ್ಣಿನ ರಸವನ್ನೂ 1 ಚಮಚ ಸಕ್ಕರೆಯನ್ನೂ ಸೇರಿಸಿ ಚೆನ್ನಾಗಿ ಮಗುಚಿರಿ. ಇನ್ನೊಂದು ಬಗೆಯ ಚಿತ್ರಾನ್ನ ರೆಡಿ. 

ಮಾಡುವ ವಿಧಾನ : - 3
ಬಾಣಲೆಗೆ ಎಣ್ಣೆಹಾಕಿ ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಸಾಸಿವೆ, ಒಣಮೆಣಸು, ಕರಿಬೇವುಸೊಪ್ಪು ಅರಶಿನ ಹುಡಿ ಹಾಕಿ. ಸೀಳು ಮಾಡಿದ ಹಸಿಮೆಣಸನ್ನು ಸೇರಿಸಿ ಸ್ವಲ್ಪಹೊತ್ತು ಮಗುಚುತ್ತಾ ಇರಿ. ನಂತರ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರವಾಗುವಂತೆ ಮಗುಚಿ. ಇದಕ್ಕೆ ನೆಲಕಡಲೆಯನ್ನು ಹಾಕಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. 

ತಮ್ಮವರೊಂದಿಗೆ ತಪ್ಪದೇ ಶೇರ್ ಮಾಡಿ.
ಇದರ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಕಮೆಂಟ್ ಹಾಕಿ. ಸಲಹೆ-ಸೂಚನೆಗಳಿದ್ದಲ್ಲಿ ತಿಳಿಸಿ.  

Sunday, 8 January 2017

ಗುಳಿಯಪ್ಪ

ಬೇಕಾಗುವ ಸಾಮಾಗ್ರಿಗಳು: -
ಬೆಳ್ತಿಗೆ ಅಕ್ಕಿ           - 1 ಲೋಟ
ಉದ್ದಿನ ಬೇಳೆ - 1/2 ಲೋಟ
ಹಸಿಮೆಣಸು - 2
ಈರುಳ್ಳಿ - 2
ಕರಿಬೇವು ಸೊಪ್ಪು - 2 ಎಸಳು
ಶುಂಠಿ - ಸಣ್ಣ ತುಂಡು
ಉಪ್ಪು - ರುಚಿಗೆ ಬೇಕಷ್ಟು

ಮಾಡುವ ವಿಧಾನ: - 
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಯಿಸಿ ಮೊದಲನೆ ದಿನ ರಾತ್ರಿ ರುಬ್ಬಿಇಡಿ. ಇದು ಇಡ್ಲಿಯ ಹಿಟ್ಟಿನ ಹದ ಇರಬೇಕು. ಮಾರನೆ ದಿನ ಈ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು ಸೊಪ್ಪು, ಶುಂಠಿ ಇದೆಲ್ಲವನ್ನು ಸಣ್ಣಗೆ ಹೆಚ್ಚಿ ಹಾಕಿ ಮತ್ತು ಉಪ್ಪು ಸೇರಿಸಿ ಸೌಟಿನಿಂದ ಚೆನ್ನಾಗಿ ಗೊಟಾಯಿಸಿ. ಈಗ ಗುಳಿಯಪ್ಪದ ಕಲ್ಲಿನಲ್ಲಿ ಈ ಹಿಟ್ಟನ್ನು ಹಾಕಿ ಕಾಯಿಸಿ ಸ್ವಲ್ಪ ಎಣ್ಣೆಯನ್ನು ಹಾಕಿ ಎರಡೂ ಬದಿಯೂ ಕಾಯುವಂತೆ ಸಣ್ಣ ಉರಿಯಲ್ಲಿ ಕಾಯಿಸಿ. ಬಿಸಿ ಬಿಸಿ ಇರುವಾಗಲೇ ಚಟ್ನಿಯೊಂದಿಗೆ ತಿನ್ನಲು ಕೊಡಿ. ಈ ಹಿಟ್ಟಿಗೆ ಕ್ಯಾರೇಟ್ ತುರಿ ಹಾಗೂ ಕೊತ್ತಂಬರಿ ಸೊಪ್ಪನ್ನೂ ಸೇರಿಸಬಹುದು.  
ಮೊದಲನೇ ದಿನದ ದೋಸೆ ಹಿಟ್ಟು ಉಳಿದರೆ ಮರುದಿನ ಆ ಹಿಟ್ಟನ್ನು ಈ ರೀತಿ ಗುಳಿಯಪ್ಪ ತಯಾರಿಸಬಹುದು. ಇಡ್ಲಿ ಹಿಟ್ಟಿನಿಂದಲೂ ಈ ಗುಳಿಯಪ್ಪವನ್ನು ತಯಾರಿಸಬಹುದು. 

ತಪ್ಪದೆ ಶೇರ್ ಮಾಡಿ

Saturday, 7 January 2017

ಓಮ ತಂಬುಳಿ (ಪಳದ್ಯ)

ಬೇಕಾಗುವ ಸಾಮಾಗ್ರಿಗಳು : - 
ಓಮ                   – 2 ಚಮಚ
ಕಾಳು ಮೆಣಸು    – 1 ಚಮಚ
ಮಜ್ಜಿಗೆ               – 2 ಲೋಟ
ಬೆಳ್ಳುಳ್ಳಿ              – 4 ಎಸಳು
ಉಪ್ಪು                – ರುಚಿಗೆ ಬೇಕಷ್ಟು




ಮಾಡುವ ವಿಧಾನ: - 
ಓಮ ಮತ್ತು ಕಾಳುಮೆಣಸನ್ನು (ಕರಿಮೆಣಸು) ಕರಿದು ಪುಡಿಮಾಡಿಟ್ಟುಕೊಳ್ಳಿ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಜಜ್ಜಿ ಒಂದು ಬಾಣಲೆಗೆ ಹಾಕಿ ಎಣ್ಣೆ ಅಥವಾ ತುಪ್ಪ ಹಾಕಿ ಕರಿಯಿರಿ. ಇದಕ್ಕೆ ಓಮ, ಕರಿಮೆಣಸಿನ ಹುಡಿಯನ್ನು ಹಾಕಿ ಮಗುಚಿ. ಉಪ್ಪು ಮತ್ತು ಮಜ್ಜಿಗೆಯನ್ನು ಸೇರಿಸಿ ಮಗುಚಿ ಕೂಡಲೆ ಒಲೆಯಿಂದ ಕೆಳಗಿಳಿಸಿ ಮುಚ್ಚಿಡಿ. ಮಜ್ಜಿಗೆ ಹೆಚ್ಚು ಬಿಸಿಯಾಗಬಾರದು. ಈಗ ಇದು ಊಟದೊಂದಿಗೆ ಬಳಸಲು ಸಿದ್ಧ. 

ಪ್ರಯೋಜನಗಳು: - 
ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಹುಳಿತೇಗು, ಅಜೀರ್ಣ, ಹುಳದ ತೊಂದರೆ ಈ ಸಮಸ್ಯೆಗಳಿಗೆ ಈ ಓಮ ತಂಬುಳಿಯು ಉಪಯುಕ್ತ ಔಷಧವಾಗಿದೆ. ನಿಯಮಿತವಾಗಿ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆಯಾದರೂ ಇದನ್ನು ಸೇವಿಸಿದರೆ ಹೊಟ್ಟೆಯ ಸಮಸ್ಯೆಗೆ ಪರಿಹಾರ ದೊರೆಯಲಿದೆ.   

ನಿಮ್ಮ ಬಳಗದವರೊಂದಿಗೆ ಹಂಚಿಕೊಳ್ಳಿ.

Friday, 6 January 2017

ಟೊಮೇಟೊ ಚಟ್ನಿ

ಬೇಕಾಗುವ ಸಾಮಾಗ್ರ್ರಿಗಳು: - 
ಟೊಮೇಟೊ                – 5
ಒಣಮೆಣಸು                – 4
ಈರುಳ್ಳಿ                        – 1
ಉಪ್ಪು                          – ರುಚಿಗೆ ತಕ್ಕಷ್ಟು
ಸಾಸಿವೆ                         – ¼ ಚಮಚ
ಕರಿಬೇವು ಸೊಪ್ಪು         – 2 ಎಸಳು
ಬೆಲ್ಲ                             ಸಣ್ಣ ತುಂಡು
ಕೊತ್ತಂಬರಿ ಸೊಪ್ಪು      – 2 ಎಸಳು


ಮಾಡುವ ವಿಧಾನ: - 1
ಟೊಮೇಟೊವನ್ನು ಚೆನ್ನಾಗಿ ಬೇಯಿಸಿ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, ಸಾಸಿವೆ, ಮೆಣಸು, ಕರಿಬೇವಿನ ಸೊಪ್ಪು ಈ ಮೂರನ್ನೂ ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಎಣ್ಣೆಹಾಕಿ ಕರಿಯಿರಿ. ಈ ಒಗ್ಗರಣೆ ಸೌಟಿನಲ್ಲಿ ಕರಿದ ಪದಾರ್ಥವನ್ನು ಬೇಯಿಸಿದ ಟೊಮೇಟೊಗೆ ಹಾಕಿ ನಂತರ ಉಪ್ಪು, ಬೆಲ್ಲ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಕೈಯಿಂದ ಹಿಚುಕಿ. ನಂತರ ಹೆಚ್ಚಿಟ್ಟ ಈರುಳ್ಳಿಯನ್ನು ಸೇರಿಸಿ ಮಗುಚಿರಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈಗ ಟೊಮೇಟೊ ಚಟ್ನಿ ಉಪಯೋಗಿಸಲು ಸಿದ್ಧ. 

ಮಾಡುವ ವಿಧಾನ: - 2
ಟೊಮೇಟೊವನ್ನು ಚೆನ್ನಾಗಿ ಬೇಯಿಸಿ, ಈರುಳ್ಳಿ, ಹಸಿ ಮೆಣಸು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, ಬೇಯಿಸಿದ ಟೊಮೇಟೊವನ್ನು ಚೆನ್ನಾಗಿ ಕೈಯಿಂದ ಹಿಚುಕಿ. ನಂತರ ಬೇಕಷ್ಟು ಉಪ್ಪು, ಒಂದು ಚಮಚ ಸಕ್ಕರೆ ಹಾಗೂ ಹೆಚ್ಚಿಟ್ಟ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಇವೆಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸಾಸಿವೆ, ಮೆಣಸು ಒಗ್ಗರಣೆ ಹಾಕಿ. ಈಗ ಇನ್ನೊಂದು ಬಗೆಯ ಟೊಮೇಟೊ ಚಟ್ನಿ ರೆಡಿ. 
ಇದು ಅತ್ಯಂತ ಶೀಘ್ರ, ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ತಯಾರಿಸಲಾಗುವ ಖಾದ್ಯ. ಸವಿಯಲೂ ರುಚಿ.

 ನಿಮ್ಮ ಬಳಗದವರೊಂದಿಗೆ ಶೇರ್ ಮಾಡಿ.

Thursday, 5 January 2017

ಬಾಳೆಹಣ್ಣಿನ ರಸಾಯನ

ಬೇಕಾಗುವ ಸಾಮಾಗ್ರಿಗಳು: - 

ಬಾಳೇಹಣ್ಣು             – 10
ಹಸುವಿನ ಹಾಲು       – 1 ಲೋಟ 
ಸಕ್ಕರೆ                        – 8 ಚಮಚ
ಏಲಕ್ಕಿ ಪುಡಿ               – ಸ್ವಲ್ಪ
ಪಚ್ಚೆ ಕರ್ಪೂರ           – 1 ಚಿಟಿಕೆ (ಬೇಕಿದ್ದಲ್ಲಿ ಮಾತ್ರ)


ಮಾಡುವ ವಿಧಾನ: - 1


ಚೆನ್ನಾಗಿ ಹಣ್ಣಾದ ಬಾಳೆಯ ಹಣ್ಣನ್ನು ಸಿಪ್ಪೆ ತೆಗೆದು ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ. ಈ ಕತ್ತರಿಸಿದ ಬಾಳೆಹಣ್ಣಿಗೆ ಹಾಲು, ಏಲಕ್ಕಿ ಪುಡಿ, ಸಕ್ಕರೆ ಮತ್ತು ಪಚ್ಚೆಕರ್ಪೂರದ ಪುಡಿ ಇವೆಲ್ಲವನ್ನೂ ಸೇರಿಸಿ ಸೌಟಿನಿಂದ ಚೆನ್ನಾಗಿ ಗೊಟಾಯಿಸಿ. ಈಗ ರಸಾಯನ ಸವಿಯಲು ಸಿದ್ಧ. ಪಚ್ಚೆ ಕರ್ಫೂರ ಹಾಕದೆಯೂ ತಯಾರಿಸಬಹುದು. ಘಮಘಮಿಸುವ ವಿಶಿಷ್ಟವಾದ ಪರಿಮಳ ಹಾಗೂ ರುಚಿಗೋಸ್ಕರ ಪಚ್ಚೆಕರ್ಪೂರವನ್ನು ಬಳಸಲಾಗುತ್ತದೆ. ಪಚ್ಚೆಕರ್ಪೂರ ಕಫಕ್ಕೆ ಒಳ್ಳೆಯ ಔಷಧಿಯಾಗಿರುತ್ತದೆ.


ಮಾಡುವ ವಿಧಾನ: - 2

ಚೆನ್ನಾಗಿ ಹಣ್ಣಾದ ಬಾಳೆಯ ಹಣ್ಣನ್ನು ಸಿಪ್ಪೆ ತೆಗೆದು ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ. ಈ ಕತ್ತರಿಸಿದ ಬಾಳೆಹಣ್ಣಿಗೆ ಕೊಬ್ಬರಿ (ತೆಂಗಿನ ಕಾಯಿ) ಹಾಲು, ಏಲಕ್ಕಿ ಪುಡಿ, ಸ್ವಲ್ಪ ಬೆಲ್ಲ ಇವೆಲ್ಲವನ್ನೂ ಸೇರಿಸಿ ಸೌಟಿನಿಂದ ಚೆನ್ನಾಗಿ ಗೊಟಾಯಿಸಿ. ರಸಾಯನ ಸಿದ್ಧ. ಈ ರಸಾಯನವನ್ನು ಚಪಾತಿ, ಅಕ್ಕಿ ಶಾವಿಗೆ, ಅವಲಕ್ಕಿಯೊಂದಿಗೆ ಬೆರೆಸಿ ತಿನ್ನಬಹುದು. ಅಥವಾ ಹಾಗೆಯೇ ಸವಿಯಬಹುದು. 

(ಪ್ರತಿ ದಿನ ವೀಕ್ಷಿಸಿ. ದಿನಕ್ಕೊಂದು ಪಾಕದಂತೆ, ತಯಾರಿಸುವ ಅತಿ ಸುಲಭ ವಿಧಾನದಲ್ಲಿ ಛಾಯಾಚಿತ್ರದೊಂದಿಗೆ ಸೇರಿಸಲಾಗುವುದು)

Wednesday, 4 January 2017

ಚುರುಮುರಿ



ಬೇಕಾಗುವ ಸಾಮಾಗ್ರಿಗಳು:- 

ಮುಂಡಕ್ಕಿ                  – 1 ಸೇರು (5 ಜನರ ಅಳತೆ)
ಈರುಳ್ಳಿ                     – 2
ಕ್ಯಾರೆಟ್                – 1
ಮೆಣಸಿನ ಹುಡಿ            – 1/2 ಚಮಚ
ಕೊತ್ತಂಬರಿ ಪುಡಿ          –  1/2 ಚಮಚ
ಉಪ್ಪು                         –  ರುಚಿಗೆ ತಕ್ಕಷ್ಟು
ಕೊಬ್ಬರಿ ಎಣ್ಣೆ              –  4 ಚಮಚ
ಕೊತ್ತಂಬರಿ ಸೊಪ್ಪು      –  ಸ್ವಲ್ಪ

ಮಾಡುವ ವಿಧಾನ: - 

ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ, ಕ್ಯಾರೇಟ್‍ನ್ನು ತುರಿಯಿರಿ. ಇವೆಲ್ಲವನ್ನೂ ಒಂದು ಪಾತ್ರೆಗೆ ಹಾಕಿ ನಂತರ ಮೆಣಸಿನ ಹುಡಿ, ಉಪ್ಪು, ಕೊತ್ತಂಬರಿ ಪುಡಿ ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಮುಂಡಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಪ್ಲೇಟ್‍ಗೆ ಹಾಕಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಲು ಕೊಡಿ.  ಇದಕ್ಕೆ ಟೊಮೇಟೊವನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಬಹುದು ಮತ್ತು 1 ಚಮಚ ಸಕ್ಕರೆಯನ್ನೂ ಬೆರೆಸಬಹುದು. ಇದು ಸ್ವಲ್ಪ ಸಿಹಿಸಿಹಿಯಾಗಿ ತಿನ್ನಲು ರುಚಿಕರವಾಗಿರುತ್ತದೆ.

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

Tuesday, 3 January 2017

ಬೆಳ್ಳುಳ್ಳಿ ಚಟ್ನಿ ಪುಡಿ

ಬೇಕಾಗುವ ಸಾಮಾಗ್ರಿಗಳು:-
100 ಗ್ರಾಂ ಬೆಳ್ಳುಳ್ಳಿ
50 ಗ್ರಾಂ ಒಣಮೆಣಸು
25 ಗ್ರಾಂ ಹುಣಿಸೆ ಹುಳಿ
25 ಗ್ರಾಂ ಉಪ್ಪು


ಮಾಡುವ ವಿಧಾನ: - 
ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ ಹಾಗೂ ಒಣಮೆಣಸನ್ನು ಕರಿಯಿರಿ. ಹುರಿದಿಟ್ಟ ಬೆಳ್ಳುಳ್ಳಿ, ಹುರಿದ ಮೆಣಸು, ಉಪ್ಪು ಮತ್ತು ಹುಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿ ಗರಿಗರಿಯಿರುವಂತೆ ರುಬ್ಬಿಕೊಳ್ಳಿ. (ಹುಣಿಸೆ ಹುಳಿಯ ಬದಲು ಹುಳಿಪುಡಿ ಬಳಸಿದರೆ ಉತ್ತಮ) ಈ ಚಟ್ನಿಪುಡಿಯನ್ನು ಗಂಜಿ ಊಟದ ಜೊತೆ, ಮೊಸರನ್ನ ಹಾಗೂ ದೋಸೆ, ಇಡ್ಲಿ ಮುಂತಾದ ತಿಂಡಿಗಳ ಜೊತೆ ಸವಿಯಲು ಬಲು ರುಚಿಕರವಾಗಿರುತ್ತದೆ. ಈ ಚಟ್ನಿಪುಡಿಯು ಆರೋಗ್ಯಕ್ಕೆ ಬಲು ಉತ್ತಮ.

ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.