Friday, 10 February 2017

ಚಪಾತಿ-ಬಾಜಿ

ಚಪಾತಿಗೆ ಬೇಕಾಗುವ ಸಾಮಾಗ್ರಿಗಳು : -
ಗೋಧಿಹಿಟ್ಟು – 2 ಲೋಟ
ಉಪ್ಪು – ರುಚಿಗೆ ಬೇಕಷ್ಟು

ಬಾಜಿಗೆ ಬೇಕಾಗುವ ಸಾಮಾಗ್ರಿಗಳು : -
ಬಟಾಟೆ – 4
ಈರುಳ್ಳಿ – 2
ಹಸಿಮೆಣಸು – 2
ಕರಿಬೇವು ಸೊಪ್ಪು – 1 ಎಸಳು
ಟೊಮೇಟೊ – 1
ಉಪ್ಪು – ರುಚಿಗೆ ಬೇಕಷ್ಟು
ಅರಶಿನ ಹುಡಿ – 1 ಚಿಟಿಕೆ

ಚಪಾತಿ ಮಾಡುವ ವಿಧಾನ : -
ಗೋಧಿ ಹಿಟ್ಟನ್ನು ಉಪ್ಪು ಹಾಕಿ ಬಿಸಿನೀರಿನಲ್ಲಿ ಲಟ್ಟಿಸಲು ಬರುವಂತೆ ಗಟ್ಟಿಯಾಗಿ ಕಲಸಿರಿ. 1 ಗಂಟೆ ಕಳೆದ ಬಳಿಕ ಈ ಹಿಟ್ಟನ್ನು ಉಂಡೆಗಳಾಗಿ ಮಾಡಿ ಚಪಾತಿ ಮಣೆಯಲ್ಲಿ ಲಟ್ಟಿಸಿರಿ. ಕಾವಲಿಯನ್ನು ಒಲೆಯ ಮೇಲಿರಿಸಿ ಚಪಾತಿ ಎರಡೂ ಬದಿಗೂ ಎಣ್ಣೆ ಹಾಕಿ ಕಾಯಿಸಿರಿ. ತುಪ್ಪ ಹಾಕಿ ಕಾಯಿಸಿದರೆ ಇನ್ನೂ ರುಚಿಯಾಗಿರುತ್ತದೆ. ಈಗ ಚಪಾತಿ ರೆಡಿ. 
ಚಪಾತಿ ಹಿಟ್ಟು ಕಲಸುವಾಗ 1 ಲಿಂಬೆ ಗಾತ್ರದಷ್ಟು ಬೆಣ್ಣೆ ಹಾಕಿ ಕಲಸಿದರೆ ಚಪಾತಿ ತುಂಬಾ ಮೃದುವಾಗಿರುತ್ತದೆ.  

ಬಾಜಿ ಮಾಡುವ ವಿಧಾನ : -
ಬಟಾಟೆಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಿ ಸಿಪ್ಪೆ ಸುಲಿದು ಹಿಚಿಕಿ ಪುಡಿಮಾಡಿ ಇಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸು, ಹಚ್ಚಿ ಇಡಿ. ಟೊಮೇಟೊವನ್ನು ಪ್ರತ್ಯೇಕವಾಗಿ ಹಚ್ಚಿ ತೆಗೆದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಒಣಮೆಣಸು, ಉದ್ದಿನ ಬೇಳೆ, ಅರಶಿನದ ಪುಡಿ ಹಾಕಿ ಒಗ್ಗರಣೆ ಮಾಡಿ ಈ ಒಗ್ಗರಣೆಗೆ ಹೆಚ್ಚಿಟ್ಟ ಈರುಳ್ಳಿ, ಕರಿಬೇವು ಸೊಪ್ಪು ಮತ್ತು ಹಸಿಮೆಣಸು ಹಾಕಿ ಮಗುಚಿರಿ. ನಂತರ ಟೊಮೇಟೊ ಹಾಕಿ ಮಗುಚುತ್ತಾ ಇರಿ. ಇದಕ್ಕೆ ಉಪ್ಪು ಮತ್ತು ಲಿಂಬೆರಸ ಹಾಕಿ ಚೆನ್ನಾಗಿ ಮಿಶ್ರವಾಗುವಂತೆ ಮಾಡಿ ಕೊನೆಯಲ್ಲಿ ಬೇಯಿಸಿ ಪುಡಿ ಮಾಡಿಟ್ಟ ಬಟಾಟೆಯನ್ನು ಹಾಕಿ ಸರಿಯಾಗಿ ಮಗುಚಿರಿ. ಸ್ವಲ್ಪ ನೀರನ್ನೂ ಹಾಕಬಹುದು. ಎಲ್ಲಾ ಕಡೆ ಉಪ್ಪು ಮತ್ತು ಲಿಂಬೆರಸ ಹರಡಲು ಇದು ಸಹಕಾರಿಯಾಗುತ್ತದೆ. ನೀರಿನಂಶ ಕಡಿಮೆಯಾದಾಗ ಕೊತ್ತಂಬರಿ ಸೊಪ್ಪನ್ನು ಹಚ್ಚಿ ಇದಕ್ಕೆ ಮಿಶ್ರ ಮಾಡಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ಚಪಾತಿಯೊಂದಿಗೆ ಬಿಸಿಬಿಸಿ ಬಾಜಿ ಹಾಕಿ ತಿನ್ನಲು ಕೊಡಿ. 


EmoticonEmoticon