Thursday, 13 December 2018

ಬಟಾಟೆ ಪೋಡಿ

ಬಟಾಟೆ ಪೋಡಿ


ಬೇಕಾಗುವ ಸಾಮಗ್ರಿಗಳು: -
ಬಟಾಟೆ - 4
ಕಡ್ಲೆ ಹಿಟ್ಟು- 100 ಗ್ರಾಮ್
ಅಕ್ಕಿ ಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಇಂಗು ಸ್ವಲ್ಪ
ಮೆಣಸಿನ ಹುಡಿ - 1 ಚಮಚ
ಎಣ್ಣೆ - 2 ಕಪ್

ಮಾಡುವ ವಿಧಾನ: -


ಬಟಾಟೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಚಿಪ್ಸ್ ಆಕಾರದಲ್ಲಿ ಕತ್ತರಿಸಿಡಿ. ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಇಂಗು ಇವುಗಳನ್ನು ಸ್ವಲ್ಪ ನೀರು ಬೆರೆಸಿ ಕಲಸಿಡಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ .ಕತ್ತರಿಸಿದ ಬಟಾಟೆಯನ್ನು ಒಂದೊಂದಾಗಿ ತೆಗೆದು ಈಗಾಗಲೇ ಕಲಸಿ ಇಟ್ಟಿರುವ  ಹಿಟ್ಟಿಗೆ ಮುಳುಗಿಸಿ ಎಣ್ಣೆ ಕಾದ ನಂತರ ಅದರಲ್ಲಿ ಬಿಡಿ. ಎರಡು ಕಡೆಯೂ ಸರಿಯಾಗಿ ಕಾಯುವಂತೆ ಮಗುಚುತ್ತಾ ಇರಿ. ಬಂಗಾರದ ಬಣ್ಣ ಬಂದಾಗ ತೆಗೆದು ಇನ್ನೊಂದು ತಟ್ಟೆಗೆ ಹಾಕಿ. ಈಗ ಬಟಾಟೆ ಪೋಡಿ ರೆಡಿಯಾಗಿದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.

ಅಕ್ಕಿ ರೊಟ್ಟಿ - ಗೇರುಬೀಜ ಸಾಂಬಾರು

ಅಕ್ಕಿ ರೊಟ್ಟಿ - ಗೇರುಬೀಜ ಸಾಂಬಾರು


ಬೇಕಾಗುವ ಸಾಮಾಗ್ರಿಗಳು: -
ಬೆಳ್ತಿಗೆ ಅಕ್ಕಿ - ಎರಡು ಲೋಟ
ತೆಂಗಿನಕಾಯಿ ತುರಿ -  4 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಗೇರುಬೀಜ - ಎರಡು ಕಪ್ಪು
ಒಣ ಮೆಣಸು - 2
ಜೀರಿಗೆ - ಒಂದು ಚಿಟಿಕೆ
ತೊಗರಿ ಬೇಳೆ - ಕಾಲು ಕೆಜಿ

ಅಕ್ಕಿ ರೊಟ್ಟಿ ಮಾಡುವ ವಿಧಾನ: -

ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ 2 ಗಂಟೆಗಳ ಕಾಲ ನೆನೆ ಹಾಕಿ. ಅಕ್ಕಿ ಉಪ್ಪು ಹಾಗೂ ಸ್ವಲ್ಪ ತೆಂಗಿನ ತುರಿಯನ್ನು ಹಾಕಿ ಗಟ್ಟಿಯಾಗಿ  ರುಬ್ಬಿಕೊಳ್ಳಿ. ಇದು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗಿರಲಿ. ನಂತರ ಇದನ್ನು ರಾಗಿಮುದ್ದೆ ಗಾತ್ರದಷ್ಟು ದೊಡ್ಡ ಉಂಡೆಗಳನ್ನಾಗಿ ಮಾಡಿ. ಒಂದೊಂದು ಉಂಡೆಗಳನ್ನು ಬಟ್ಟೆಯ ಮೇಲೆ ಇಟ್ಟು ಇನ್ನೊಂದು ಬಟ್ಟೆಯಿಂದ ಮುಚ್ಚಿ ಹಪ್ಪಳ ಒತ್ತಿದಂತೆ 2 ಮಣೆಗಳ  ಸಹಾಯದಿಂದ ಒತ್ತಿ. ಇದು ದೋಸೆ ಆಕಾರದಲ್ಲಿ ಇರುತ್ತದೆ. ಇದನ್ನು ಕಾವಲಿಯ ಮೇಲೆ ಹಾಕಿ ಕಾಯಿಸಿ ಎರಡು ಬದಿಗಳು ಕಾದ ನಂತರ ಈ ರೊಟ್ಟಿಯನ್ನು ಕೆಂಡದ ಮೇಲೆ ಅಥವಾ ಉರಿಯುತ್ತಿರುವ ಗ್ಯಾಸಿನ ಬೆಂಕಿಯ ಮೇಲೆ ಇಟ್ಟು ಮತ್ತೊಮ್ಮೆ ಕಾಯಿಸಬೇಕು. ಹೀಗೆ ಎಲ್ಲ ರೊಟ್ಟಿಗಳನ್ನು ಕಾಯಿಸಿ.ಈಗ ಅಕ್ಕಿಯ ರೊಟ್ಟಿ ರೆಡಿ

ಗೇರುಬೀಜ ಸಾಂಬಾರು

ಮಾಡುವ ವಿಧಾನ:-
ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಈಗ ತೆಂಗಿನಕಾಯಿ ತುರಿಗೆ 2 ಒಣ ಮೆಣಸು ಮತ್ತು ಒಂದು ಚಿಟಿಕೆ ಜೀರಿಗೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ  ರುಬ್ಬಿಕೊಳ್ಳಿ. ಗೇರು ಬೀಜವನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಗೇರುಬೀಜ, ತೊಗರಿ ಬೇಳೆ ಹಾಗೂ ರುಬ್ಬಿ ಇಟ್ಟಿರುವ ಮಸಾಲೆ ಇವುಗಳನ್ನು ಒಟ್ಟಾಗಿ ಸೇರಿಸಿ ಒಲೆಯ ಮೇಲಿಟ್ಟು ಬೇಯಲು ಬಿಡಿ. ಇದಕ್ಕೆ ಉಪ್ಪು ಮತ್ತು ಅರಶಿನದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಈಗ ಬೀಜ ಸಾಂಬಾರ್ ರೆಡಿ. ಈ ಸಾಂಬಾರನ್ನು ಮೊದಲೇ ಮಾಡಿಟ್ಟಿರುವ ಅಕ್ಕಿ ರೊಟ್ಟಿಯ ಜೊತೆ ಸವಿಯಲು ಕೊಡಿ.

ಕೊತ್ತಂಬರಿ ಸೊಪ್ಪು ಚಟ್ನಿ

ಕೊತ್ತಂಬರಿ ಸೊಪ್ಪು ಚಟ್ನಿ


ಬೇಕಾಗುವ ಸಾಮಗ್ರಿಗಳು : -

ಕೊತ್ತಂಬರಿ ಸೊಪ್ಪು - 100 ಗ್ರಾಂ
ಉಪ್ಪು-  ಒಂದು ಹಿಡಿ
ಹುಣಿಸೆಹುಳಿ - ನಿಂಬೆ ಗಾತ್ರದಷ್ಟು
 ಹಸಿಮೆಣಸು - 10

ಇಂಗು - ಹುಣಸಿ ಬೀಜ ಗಾತ್ರದಷ್ಟು
ತೆಂಗಿನ ತುರಿ ತೆಂಗಿನಕಾಯಿ ತುರಿ - 1 ಕಪ್

ಮಾಡುವ ವಿಧಾನ: -

ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುದ್ಧೀಕರಿಸಿ. ನಂತರ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಾಗಿ ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿ. ಈಗ ಕೊತ್ತಂಬರಿ ಸೊಪ್ಪಿನ ಚಟ್ನಿ ರೆಡಿ. ಇದು ಗಂಜಿ ಊಟ ಮತ್ತು ಮೊಸರನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

ಅಕ್ಕಿ ಪುಂಡಿ

ಅಕ್ಕಿ ಪುಂಡಿ




ಬೇಕಾಗುವ ಸಾಮಾಗ್ರಿಗಳು:-

ಕುಚ್ಚಿಗೆ ಅಕ್ಕಿ- 2 ಕಪ್
ತೆಂಗಿನಕಾಯಿ ತುರಿ - 1 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: -

ಅಕ್ಕಿಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಅಕ್ಕಿ, ತೆಂಗಿನಕಾಯಿ ತುರಿ ಮತ್ತು ಉಪ್ಪನ್ನು ಹಾಕಿ ಇದನ್ನು ಚೆನ್ನಾಗಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಹಿಟ್ಟು ಸ್ವಲ್ಪ ತೆಳುವಾಗಿರಲಿ. ನಂತರ ಈ ಹಿಟ್ಟನ್ನು ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಗೊಟಾಯಿಸಿ. ಇದು ಗಟ್ಟಿಯಾದಾಗ ಉಂಡೆಗಳಾಗಿ ಮಾಡಿ ಇಡ್ಲಿ ಪಾತ್ರೆಯಲ್ಲಿ ಈ ಉಂಡೆಗಳನ್ನು ಇಟ್ಟು ಹಬೆಯಲ್ಲಿ ಹತ್ತು ನಿಮಿಷಗಳ ಕಾಲ ಬೇಯಿಸಿ. ಈಗ  ಅಕ್ಕಿ ಪುಂಡಿ ರೆಡಿ. ಇದು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿ. ಬೆಳ್ತಿಗೆ ಅಕ್ಕಿಯಿಂದಲೂ ಇದನ್ನು ಮಾಡಬಹುದು ಅಥವಾ ಒಂದು ಲೋಟ ಬೆಳ್ತಿಗೆ ಅಕ್ಕಿ ಮತ್ತು ಒಂದು ಲೋಟ ಕುಚ್ಚಿಗೆ ಅಕ್ಕಿಯನ್ನು ಬೆರೆಸಿ ಮಾಡಬಹುದು. ಇದು ಬೆಳಗಿನ ಉಪಹಾರಕ್ಕೆ ಉತ್ತಮ ತಿಂಡಿ.

ರಾಗಿ ಮುದ್ದೆ

ರಾಗಿ ಮುದ್ದೆ


ಬೇಕಾಗುವ ಸಾಮಗ್ರಿಗಳು : -
ರಾಗಿ ಹಿಟ್ಟು - 2 ಲೋಟ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: -
ರಾಗಿ ಹಿಟ್ಟಿಗೆ ಉಪ್ಪು ಮತ್ತು ಒಂದು ಲೋಟ ನೀರು ಹಾಕಿ ಚೆನ್ನಾಗಿ ಕಲಸಿ. ನೀರು ಹಾಕಿ ಕಲಸಿದ ಈ ರಾಗಿಹಿಟ್ಟನ್ನು ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಗೊಟಾಯಿಸಿ. ಇದು ಗಟ್ಟಿಯಾದಾಗ ಇದನ್ನು ಉಂಡೆಗಳಾಗಿ ಮಾಡಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ  ಇಡ್ಲಿ ಬೀಸಿದಂತೆ ಐದು ನಿಮಿಷಗಳ ಕಾಲ ಬೇಯಿಸಿ. ಇಲ್ಲವಾದರೆ ಅಲ್ಲಲ್ಲಿ ಹಸಿ ಹಿಟ್ಟುಗಳು ಉಳಿಯುವ ಸಾಧ್ಯತೆ ಇರುತ್ತದೆ. ನಂತರ ಈ ರಾಗಿ ಮುದ್ದೆಯನ್ನು ಸೊಪ್ಪಿನ ಸಾರು ಅಥವಾ ಟೊಮೇಟೊ ಸಾರಿನೊಂದಿಗೆ ತಿನ್ನಲು ಕೊಡಿ. ಇದು ಆರೋಗ್ಯಕ್ಕೆ ಉತ್ತಮ ಆಹಾರ.

ಇನ್ನೊಂದು ವಿಧಾನ : -
ಬಾಣಲೆಯಲ್ಲಿ ನೀರು ಹಾಕಿ ಅದಕ್ಕೆ ಉಪ್ಪನ್ನು ಹಾಕಿ ಕುದಿಸಿ. ಕುದಿಯುತ್ತಿರುವ ನೀರಿಗೆ ಸ್ವಲ್ಪ ಸ್ವಲ್ಪವೇ ರಾಗಿ ಹಿಟ್ಟನ್ನು ಹಾಕಿ ಕದಡುತ್ತಾ ಇರಿ. ಸರಿಯಾಗಿ ಬೆಂದ ಮೇಲೆ ಗಟ್ಟಿಯಾಗುತ್ತದೆ. ಆನಂತರ ಇದನ್ನು ಉಂಡೆಗಳಾಗಿ ಮಾಡಿ. ಈ ವಿಧಾನವಾಗಿ ಮಾಡಿದಾಗ ಹಿಟ್ಟು ಅಲ್ಲಲ್ಲಿ ಗಟ್ಟಿಯಾಗಿ ಸಣ್ಣ ಸಣ್ಣ ಉಂಡೆಗಳಾಗಿ ಉಳಿಯುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಮೇಲೆ ತಿಳಿಸಿದ ವಿಧಾನದಲ್ಲಿ ಮಾಡಿದರೆ  ಒಳ್ಳೆಯದು.

Tuesday, 11 December 2018

ಉಂಡಲಕಾಳು


ಉಂಡಲಕಾಳು :

ಬೇಕಾಗುವ ಸಾಮಾಗ್ರಿಗಳು :
ಉಪ್ಪಿನಲ್ಲಿ ಹಾಕಿಟ್ಟ ಹಲಸಿನಸೋಳೆ  - 1 ಹಿಡಿ
ತೆಂಗಿನಕಾಯಿ ತುರಿ  - 1 ಸಣ್ಣ ಕಪ್
ಒಣಮೆಣಸು  - 2
ಕೊತ್ತಂಬ್ರಿ ಬೀಜ  - 1 ಚಮಚ
ಬೆಳ್ತಿಗೆ ಅಕ್ಕಿ - 1 ಕಪ್
ಕರಿಯಲು ಎಣ್ಣೆ  - 2 ಕಪ್


ಮಾಡುವ ವಿಧಾನ :
ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆಯ ಕಾಲ ನೀರಿನಲ್ಲಿ ನೆನೆಯಿಸಿ ನಂತರ ಅಕ್ಕಿಯನ್ನು ತೊಳೆದು ಅದಕ್ಕೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೋಳೆ, ತೆಂಗಿನಕಾಯಿ ತುರಿ, ಒಣಮೆಣಸು. ಕೊತ್ತಂಬರಿ ಬೀಜ ಇವೆಲ್ಲವನ್ನೂ ಹಾಕಿ ಗಟ್ಟಿಯಾಗಿ ರುಬ್ಬಿ. ಹಿಟ್ಟು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗಿರಲಿ. ಒಂದು ವೇಳೆ ಹಿಟ್ಟು ತೆಳ್ಳಗಾಗಿ ಉಂಡೆ ಮಾಡಲು ಬರದಿದ್ದರೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಗಟ್ಟಿಯಾಗುವಂತೆ ಕಲಸಿರಿ. ಇದಕ್ಕೆ ಉಪ್ಪು ಹಾಕುವ ಅವಶ್ಯಕತೆ ಇಲ್ಲ. ಉಪ್ಪಿನಲ್ಲಿ ನೆನೆಯಿಸಿ ಇಟ್ಟ ಹಲಸಿನ ಸೋಳೆಯಲ್ಲಿಯೇ ಇದಕ್ಕೆ ಬೇಕಾದ ಉಪ್ಪು ಇರುತ್ತದೆ. ಕೊತ್ತಂಬರಿ ಮತ್ತು ಒಣ ಮೆಣಸನ್ನು ಹುರಿಯುವ ಅವಶ್ಯಕತೆಯೂ ಇಲ್ಲ. ಹುರಿದರೂ ಆಗುತ್ತದೆ. ರುಚಿಯಲ್ಲಿ ವ್ಯತ್ಯಾಸ ಬರುತ್ತದೆ. ಹೀಗೆ ಗಟ್ಟಿಯಾಗಿ ರುಬ್ಬಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಇಟ್ಟುಕೊಳ್ಳಿ. ನಂತರ ಒಲೆಯಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆಹಾಕಿ ಕಾದಮೇಲೆ ಈ ಉಂಡೆಗಳನ್ನು ಆ ಎಣ್ಣೆಯಲ್ಲಿ ಹಾಕಿ ಕಾಯಿಸಿ. ಅದು ಚೆನ್ನಾಗಿ ಕಾದು ಬಂಗಾರದ ಬಣ್ಣ ಬಂದ ನಂತರ ಎಣ್ಣೆಯಿಂದ ತೆಗೆಯಿರಿ. ಗಾಳಿಯಾಡದಂತೆ ಡಬ್ಬದಲ್ಲಿ ಶೇಕರಿಸಿ ಇಡಿ. ಇದು ತುಂಬಾ ಗಟ್ಟಿಯಾಗಿರುವುದರಿಂದ ಬಹಳ ದಿನ ಹಾಳಾಗದೆ ಉಳಿಯುತ್ತದೆ. ಹಾಗೂ ತಿನ್ನಲು ಬಲು ರುಚಿ.