ಅಕ್ಕಿ ರೊಟ್ಟಿ - ಗೇರುಬೀಜ ಸಾಂಬಾರು
ಬೇಕಾಗುವ ಸಾಮಾಗ್ರಿಗಳು: -
ಬೆಳ್ತಿಗೆ ಅಕ್ಕಿ - ಎರಡು ಲೋಟ
ತೆಂಗಿನಕಾಯಿ ತುರಿ - 4 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಗೇರುಬೀಜ - ಎರಡು ಕಪ್ಪು
ಒಣ ಮೆಣಸು - 2
ಜೀರಿಗೆ - ಒಂದು ಚಿಟಿಕೆ
ತೊಗರಿ ಬೇಳೆ - ಕಾಲು ಕೆಜಿ
ಅಕ್ಕಿ ರೊಟ್ಟಿ ಮಾಡುವ ವಿಧಾನ: -
ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ 2 ಗಂಟೆಗಳ ಕಾಲ ನೆನೆ ಹಾಕಿ. ಅಕ್ಕಿ ಉಪ್ಪು ಹಾಗೂ ಸ್ವಲ್ಪ ತೆಂಗಿನ ತುರಿಯನ್ನು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗಿರಲಿ. ನಂತರ ಇದನ್ನು ರಾಗಿಮುದ್ದೆ ಗಾತ್ರದಷ್ಟು ದೊಡ್ಡ ಉಂಡೆಗಳನ್ನಾಗಿ ಮಾಡಿ. ಒಂದೊಂದು ಉಂಡೆಗಳನ್ನು ಬಟ್ಟೆಯ ಮೇಲೆ ಇಟ್ಟು ಇನ್ನೊಂದು ಬಟ್ಟೆಯಿಂದ ಮುಚ್ಚಿ ಹಪ್ಪಳ ಒತ್ತಿದಂತೆ 2 ಮಣೆಗಳ ಸಹಾಯದಿಂದ ಒತ್ತಿ. ಇದು ದೋಸೆ ಆಕಾರದಲ್ಲಿ ಇರುತ್ತದೆ. ಇದನ್ನು ಕಾವಲಿಯ ಮೇಲೆ ಹಾಕಿ ಕಾಯಿಸಿ ಎರಡು ಬದಿಗಳು ಕಾದ ನಂತರ ಈ ರೊಟ್ಟಿಯನ್ನು ಕೆಂಡದ ಮೇಲೆ ಅಥವಾ ಉರಿಯುತ್ತಿರುವ ಗ್ಯಾಸಿನ ಬೆಂಕಿಯ ಮೇಲೆ ಇಟ್ಟು ಮತ್ತೊಮ್ಮೆ ಕಾಯಿಸಬೇಕು. ಹೀಗೆ ಎಲ್ಲ ರೊಟ್ಟಿಗಳನ್ನು ಕಾಯಿಸಿ.ಈಗ ಅಕ್ಕಿಯ ರೊಟ್ಟಿ ರೆಡಿ
ಗೇರುಬೀಜ ಸಾಂಬಾರು
ಮಾಡುವ ವಿಧಾನ:-
ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಈಗ ತೆಂಗಿನಕಾಯಿ ತುರಿಗೆ 2 ಒಣ ಮೆಣಸು ಮತ್ತು ಒಂದು ಚಿಟಿಕೆ ಜೀರಿಗೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಗೇರು ಬೀಜವನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಗೇರುಬೀಜ, ತೊಗರಿ ಬೇಳೆ ಹಾಗೂ ರುಬ್ಬಿ ಇಟ್ಟಿರುವ ಮಸಾಲೆ ಇವುಗಳನ್ನು ಒಟ್ಟಾಗಿ ಸೇರಿಸಿ ಒಲೆಯ ಮೇಲಿಟ್ಟು ಬೇಯಲು ಬಿಡಿ. ಇದಕ್ಕೆ ಉಪ್ಪು ಮತ್ತು ಅರಶಿನದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಈಗ ಬೀಜ ಸಾಂಬಾರ್ ರೆಡಿ. ಈ ಸಾಂಬಾರನ್ನು ಮೊದಲೇ ಮಾಡಿಟ್ಟಿರುವ ಅಕ್ಕಿ ರೊಟ್ಟಿಯ ಜೊತೆ ಸವಿಯಲು ಕೊಡಿ.


EmoticonEmoticon