ಉಂಡಲಕಾಳು :
ಬೇಕಾಗುವ ಸಾಮಾಗ್ರಿಗಳು :
ಉಪ್ಪಿನಲ್ಲಿ ಹಾಕಿಟ್ಟ ಹಲಸಿನಸೋಳೆ - 1 ಹಿಡಿ
ತೆಂಗಿನಕಾಯಿ ತುರಿ - 1 ಸಣ್ಣ ಕಪ್
ಒಣಮೆಣಸು - 2
ಕೊತ್ತಂಬ್ರಿ ಬೀಜ - 1 ಚಮಚ
ಬೆಳ್ತಿಗೆ ಅಕ್ಕಿ - 1 ಕಪ್
ಕರಿಯಲು ಎಣ್ಣೆ - 2 ಕಪ್
ಮಾಡುವ ವಿಧಾನ :
ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆಯ ಕಾಲ ನೀರಿನಲ್ಲಿ ನೆನೆಯಿಸಿ ನಂತರ ಅಕ್ಕಿಯನ್ನು ತೊಳೆದು ಅದಕ್ಕೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೋಳೆ, ತೆಂಗಿನಕಾಯಿ ತುರಿ, ಒಣಮೆಣಸು. ಕೊತ್ತಂಬರಿ ಬೀಜ ಇವೆಲ್ಲವನ್ನೂ ಹಾಕಿ ಗಟ್ಟಿಯಾಗಿ ರುಬ್ಬಿ. ಹಿಟ್ಟು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗಿರಲಿ. ಒಂದು ವೇಳೆ ಹಿಟ್ಟು ತೆಳ್ಳಗಾಗಿ ಉಂಡೆ ಮಾಡಲು ಬರದಿದ್ದರೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಗಟ್ಟಿಯಾಗುವಂತೆ ಕಲಸಿರಿ. ಇದಕ್ಕೆ ಉಪ್ಪು ಹಾಕುವ ಅವಶ್ಯಕತೆ ಇಲ್ಲ. ಉಪ್ಪಿನಲ್ಲಿ ನೆನೆಯಿಸಿ ಇಟ್ಟ ಹಲಸಿನ ಸೋಳೆಯಲ್ಲಿಯೇ ಇದಕ್ಕೆ ಬೇಕಾದ ಉಪ್ಪು ಇರುತ್ತದೆ. ಕೊತ್ತಂಬರಿ ಮತ್ತು ಒಣ ಮೆಣಸನ್ನು ಹುರಿಯುವ ಅವಶ್ಯಕತೆಯೂ ಇಲ್ಲ. ಹುರಿದರೂ ಆಗುತ್ತದೆ. ರುಚಿಯಲ್ಲಿ ವ್ಯತ್ಯಾಸ ಬರುತ್ತದೆ. ಹೀಗೆ ಗಟ್ಟಿಯಾಗಿ ರುಬ್ಬಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಇಟ್ಟುಕೊಳ್ಳಿ. ನಂತರ ಒಲೆಯಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆಹಾಕಿ ಕಾದಮೇಲೆ ಈ ಉಂಡೆಗಳನ್ನು ಆ ಎಣ್ಣೆಯಲ್ಲಿ ಹಾಕಿ ಕಾಯಿಸಿ. ಅದು ಚೆನ್ನಾಗಿ ಕಾದು ಬಂಗಾರದ ಬಣ್ಣ ಬಂದ ನಂತರ ಎಣ್ಣೆಯಿಂದ ತೆಗೆಯಿರಿ. ಗಾಳಿಯಾಡದಂತೆ ಡಬ್ಬದಲ್ಲಿ ಶೇಕರಿಸಿ ಇಡಿ. ಇದು ತುಂಬಾ ಗಟ್ಟಿಯಾಗಿರುವುದರಿಂದ ಬಹಳ ದಿನ ಹಾಳಾಗದೆ ಉಳಿಯುತ್ತದೆ. ಹಾಗೂ ತಿನ್ನಲು ಬಲು ರುಚಿ.

EmoticonEmoticon